You are on page 1of 2

"ಚಿತ್ರಯೋಧೀ ದ್ರೋಣನೂ ಕೂಡ ಸಮರದಲ್ಲಿ ವಿವಿಧ ಅಸ್ತ್ರಗಳ ಪ್ರದರ್ಶನ ಮಾಡಿದರೂ ಪಾಂಡವರಲ್ಲಿ ಶ್ರೇಷ್ಠನಾದ

ಯಾರೊಬ್ಬನನ್ನೂ ಕೊಲ್ಲಲಿಲ್ಲ. ವೀರ ಕರ್ಣನೂ ಕೂಡ ಧನುಸ್ಸಿನ ತುದಿಯಿಂದ ಭೀಮನನ್ನು ಎಳೆಯುತ್ತಾ ತನ್ನ ವಶದಲ್ಲಿ
ತೆಗೆದುಕೊಂಡಿದ್ದರೂ ಬರಿಯ ಮೂದಲಿಕೆಯ ಮಾತುಗಳನ್ನು ಹೇಳಿ ಅವನನ್ನು ವಧಿಸದೇ ಬಿಟ್ಟನು. ದ್ರೋಣ, ಕೃತವರ್ಮ, ಕೃಪ, ಕರ್ಣ,
ಅಶ್ವತ್ಥಾಮ ಮತ್ತು ಮದ್ರರಾಜ ಶಲ್ಯ ಇವರೆಲ್ಲರೂ ಸೈಂಧವನ ವಧೆಯಾಗಲು ಬಿಟ್ಟರು. ದೇವರಾಜನಿಂದ ದೊರೆತ ದಿವ್ಯ ಶಕ್ತಿಯನ್ನು
ಕರ್ಣನು ಮಾಧವನ ಯೋಜನೆಯಂತೆ ಘೋರರೂಪೀ ರಾಕ್ಷಸ ಘಟೋತ್ಕಚನ ಮೇಲೆ ಉಪಯೋಗಿಸಿದನು. ಆಚಾರ್ಯ ದ್ರೋಣನು
ಒಬ್ಬನೇ ರಥದಲ್ಲಿ ಕುಳಿತು ಪ್ರಾಯಗತನಾಗಿದ್ದಾಗ ಧರ್ಮವನ್ನು ಅತಿಕ್ರಮಿಸಿ ಧೃಷ್ಟದ್ಯುಮ್ನನು ಅವನನ್ನು ಸಂಹರಿಸಿದನು.
ದ್ರೋಣಾವಸಾನದ ನಂತರ ಅವನ ಮಗ ಅಶ್ವತ್ಥಾಮನು ಬಿಟ್ಟ ದಿವ್ಯ ನಾರಾಯಣಾಸ್ತ್ರವೂ ಪಾಂಡವರನ್ನು ಕೊನೆಗೊಳಿಸುವಲ್ಲಿ
ಅಸಫಲವಾಯಿತು. ಯುದ್ಧದಲ್ಲಿ ಗೆಲ್ಲಲಸಾಧ್ಯ ಅತಿ ಶೂರನ ಕರ್ಣನೂ ಕೂಡ ದೇವತೆಗಳಿಗೂ ಗುಹ್ಯವಾಗಿದ್ದ ಆ ಸಹೋದರರ
ಸಮರದಲ್ಲಿ ಪಾರ್ಥನಿಂದ ಹತನಾದ! ಸಂಗ್ರಾಮ ಸಾರಥ್ಯದಲ್ಲಿ ಕೃಷ್ಣನೊಂದಿಗೆ ಸ್ಪರ್ಧಿಸುತ್ತಿದ್ದ ಶೂರ ಮದ್ರರಾಜನು ಧರ್ಮರಾಜನಿಂದ
ಮತ್ತು ಕಲಹದ್ಯೂತದ ಮೂಲ, ಮಹಾಮಾಯ ಪಾಪಿ ಸೌಬಲ ಶಕುನಿಯು ಸಂಗ್ರಾಮದಲ್ಲಿ ಪಾಂಡವ ಸಹದೇವನಿಂದ ಹತರಾದರು.
ಭಗ್ನದರ್ಪ ದುರ್ಯೋಧನನು ವಿರಥನಾಗಿ ಸರೋವರಕ್ಕೆ ಹೋಗಿ ನೀರನ್ನು ಸ್ಥಿರಗೊಳಿಸಿ ಒಬ್ಬನೇ ಮಲಗಿ ವಿಶ್ರಾಂತಿ
ಪಡೆದುಕೊಳ್ಳುತ್ತಿರುವಾಗ ವಾಸುದೇವನನ್ನೊಡಗೂಡಿದ ಪಾಂಡವರು ಅದೇ ಸರೋವರದ ದಡದಮೇಲೆ ನಿಂತು ನನ್ನ ಮಗನನ್ನು
ಅಸಹ್ಯ ಮತ್ತು ಅಶ್ಲೀಲವಾಗಿ ಮೂದಲಿಸಿದರು. ಗದಾಯುದ್ಧದಲ್ಲಿ ಅತ್ಯಂತ ಕುಶಲಿಯಾಗಿದ್ದ ನನ್ನ ಮಗನನ್ನು ಕೃಷ್ಣನ ಸಲಹೆಯಂತೆ
ಅನ್ಯಾಯವಾಗಿ ಹೊಡೆದುರುಳಿಸಲಾಯಿತು! ಮಲಗಿದ್ದ ಪಾಂಚಾಲ ಮತ್ತು ದ್ರೌಪದಿಯ ಮಕ್ಕಳನ್ನು ಅಶ್ವತ್ಥಾಮ ಮತ್ತು ಇತರರು
ಅನಾವಶ್ಯಕವಾಗಿ ಕೊಲ್ಲುವ ಬೀಭತ್ಸ ಕರ್ಮವನ್ನೆಸಗಿದರು. ಭೀಮಸೇನನು ಬೆನ್ನಟ್ಟಿ ಹೋಗಲು ಅಶ್ವತ್ಥಾಮನು ಸಿಟ್ಟಿನಿಂದ
ಹುಲ್ಲುಕಡ್ಡಿಯ ಮೂಲಕ ಪರಮಾಸ್ತ್ರವನ್ನು ಬಿಟ್ಟು ಗರ್ಭವಧೆಗೈದನು. ಅಶ್ವತ್ಥಾಮನ ಬ್ರಹ್ಮಶಿರವು ಅರ್ಜುನನು ಸ್ವಸ್ತಿ ಎಂದು ಬಿಟ್ಟ
ಅಸ್ತ್ರದಿಂದ ಶಾಂತಗೊಂಡಿತು.

"ಪಾಂಡವರು ಸರಿಸಾಟಿಯಿಲ್ಲದ ರಾಜ್ಯವನ್ನು ಪುನಃ ಪಡೆಯುವ ದುಷ್ಕರ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಕ್ಕಳು,
ಮೊಮ್ಮಕ್ಕಳು, ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಗಾಂಧಾರಿಯ ಕುರಿತು ಶೋಕಿಸಬೇಕು. ಈ ಸಂಗ್ರಾಮದಲ್ಲಿ ೧೮
ಅಕ್ಷೌಹಿಣೀ ಕ್ಷತ್ರಿಯರು ಹತರಾಗಿ ಕೇವಲ ೧೦ ಮಂದಿ ಮಾತ್ರ – ನಮ್ಮವರು ಮೂರು ಮತ್ತು ಪಾಂಡವರ ಕಡೆಯವರು ಏಳು –
ಉಳಿದುಕೊಂಡಿದ್ದಾರೆ ಎನ್ನುವುದನ್ನು ಕೇಳಲು ಬಹಳ ಕಷ್ಟವಾಗುತ್ತಿದೆ. ಸೂತ! ನನ್ನ ಮನಸ್ಸು ವಿಹ್ವಲವಾಗಿದೆ. ಪ್ರಜ್ಞೆಯನ್ನು
ಕಳೆದುಕೊಂಡವನಂತಾಗಿದ್ದೇನೆ. ಮೋಹಪರವಶನಾದ ನನ್ನನ್ನು ಕತ್ತಲೆಯು ಆವರಿಸುತ್ತಿದೆ!”

ಬಹುದುಃಖಿತ ಧೃತರಾಷ್ಟ್ರನು ಈ ರೀತಿ ವಿಲಪಿಸುತ್ತಾ ಮೂರ್ಛೆ ಹೊಂದಿ, ಪುನಃ ಎಚ್ಚೆತ್ತು ಸಂಜಯನಿಗೆ ಹೇಳಿದನು: “ಸಂಜಯ!
ಈಗಲೇ ಈ ಪ್ರಾಣವನ್ನು ತ್ಯಜಿಸಲು ಬಯಸುತ್ತೇನೆ. ಬದುಕಿರುವುದರಲ್ಲಿ ಯಾವ ಫಲವನ್ನೂ ಕಾಣುತ್ತಿಲ್ಲ!”

ಈ ರೀತಿ ಹೇಳಿ ದೀನನಾಗಿ ವಿಲಪಿಸುತ್ತಿದ್ದ ಮಹೀಪತಿಗೆ ಧೀಮಂತ ಗಾವಲ್ಗಣಿ ಸಂಜಯನು ಮಹಾರ್ಥವುಳ್ಳ ಈ


ಮಾತುಗಳನ್ನಾಡಿದನು: “ಮಹಾಬಲಶಾಲಿಗಳೂ ಮಹೋತ್ಸಾಹಿಗಳೂ ಆದ ರಾಜರ ಕುರಿತು ಧೀಮಂತ ದ್ವೈಪಾಯನ ಮತ್ತು
ನಾರದರು ಹೇಳಿದ  ಮಾತುಗಳನ್ನು ಕೇಳಿದ್ದೀಯೆ. ಮಹಾರಾಜವಂಶಗಳಲ್ಲಿ ಜನಿಸಿದ ಹಲವಾರು ಉತ್ತಮ ಗುಣಶಾಲಿಗಳೂ,
ದಿವ್ಯಾಸ್ತ್ರವಿದುಷರೂ, ಶಕ್ರನಂತೆ ತೇಜಸ್ವಿಗಳೂ ಆದ ಎಷ್ಟೋ ರಾಜರುಗಳು ಧರ್ಮಪೂರಕವಾಗಿ ಈ ಭೂಮಿಯನ್ನು ಆಳಿ, ಧಾರಾಳ
ದಕ್ಷಿಣೆಗಳಿಂದ ಯಜ್ಞಕಾರ್ಯಗಳನ್ನೆಸಗಿ ಈ ಲೋಕದಲ್ಲಿ ಯಶವನ್ನು ಹೊಂದಿ ನಂತರದಲ್ಲಿ ಎಲ್ಲರೂ ಕಾಲವಶರಾದರು. ನೂರಾರು
ಸಹಸ್ರಾರು ಸಂಖ್ಯೆಗಳಲ್ಲಿ ಬುದ್ಧಿವಂತ ಮಹಾಬಲ ರಾಜರುಗಳು ವಿಪುಲ ಭೋಗಗಳನ್ನು ತೊರೆದು ನಿನ್ನ ಪುತ್ರರ ಹಾಗೆ ಮಹತ್ತಮ
ನಿಧನ ಹೊಂದಿದ್ದಾರೆ. ಯಾರ ದಿವ್ಯಕರ್ಮಗಳನ್ನು, ವಿಕ್ರಮ-ತ್ಯಾಗ-ಮಹಾತ್ಮೆ-ಅಸ್ತಿತ್ವ-ಸತ್ಯತೆ ಮತ್ತು ಶುದ್ಧತೆಗಳನ್ನು ಪುರಾಣಗಳು
ಹೊಗಳಿದ್ದಾರೋ ಅವರೆಲ್ಲ ಗುಣಸಂಪನ್ನರೂ ಎಷ್ಟೋ ಕಾಲದ ಹಿಂದೆಯೇ ನಿಧನರಾಗಿ ಹೋಗಿದ್ದಾರೆ. ನಿನ್ನ ಮಕ್ಕಳಾದರೋ
ದುರಾತ್ಮರಾಗಿದ್ದರು. ಸಿಟ್ಟು ಮತ್ತು ಲೋಭದಿಂದ ಉರಿಯುತ್ತಿದ್ದರು. ದುರ್ವೃತ್ತಿಗಳಾಗಿದ್ದರು. ಅಂಥವರಿಗಾಗಿ ನೀನು ಶೋಚಿಸುವುದು
ಸರಿಯಲ್ಲ. ಭಾರತ! ನೀನು ಶೃತಿಗಳನ್ನು ಅರಿತವನೂ, ಮೇಧಾವಿಯೂ, ಬುದ್ಧಿವಂತನೂ, ಪ್ರಜ್ಞಸಮ್ಮತನೂ ಆಗಿದ್ದೀಯೆ. ಶಾಸ್ತ್ರಗಳನ್ನು
ಅನುಸರಿಸುವವರು ಹೀಗೆ ಶೋಕಿಸುವುದಿಲ್ಲ. ನರಾಧಿಪ! ನೀನು ವಿಧಿಯ ನಿಗ್ರಹ-ಅನುಗ್ರಹಗಳನ್ನು ತಿಳಿದಿದ್ದೀಯೆ. ಪುತ್ರರಕ್ಷಣೆಗೆಂದು
ನೀನು ಮಾಡಿದುದೆಲ್ಲವನ್ನೂ ವಿಧಿಯು ಮೊದಲೇ ನಿರ್ಧರಿಸಿತ್ತು. ಹೀಗೆಯೇ ಆಗಬೇಕೆಂದು ಇದ್ದುದಕ್ಕೆ ಶೋಕಿಸುವುದು ಸರಿಯಲ್ಲ.
ಪ್ರಜ್ಞಾವಿಶೇಷದಿಂದ ಯಾರುತಾನೇ ದೈವವನ್ನು ತಡೆಗಟ್ಟಲು ಸಾಧ್ಯ? ವಿಧಾತನಿಂದ ಹಾಕಿ ಕೊಟ್ಟ ಮಾರ್ಗವನ್ನು ಬಿಟ್ಟು ಹೋಗುವುದು
ಯಾರಿಗೂ ಅಸಾಧ್ಯ. ಆಗುವಂತದ್ದು-ಆಗದಿರುವಂತದ್ದು, ಸುಖ-ದುಃಖ ಇವೆಲ್ಲವೂ ಕಾಲದಿಂದಲೇ ಹುಟ್ಟುತ್ತವೆ. ಇರುವ ಎಲ್ಲವನ್ನೂ
ಕಾಲವೇ ಸೃಷ್ಟಿಸುತ್ತದೆ ಮತ್ತು ಇರುವ ಎಲ್ಲವನ್ನೂ ಅದೇ ನಾಶಪಡಿಸುತ್ತದೆ. ಹುಟ್ಟಿದ ಎಲ್ಲವನ್ನೂ ಕಾಲವು ಸುಡುತ್ತದೆ ಮತ್ತು ಕಾಲವೇ
ಆ ಅಗ್ನಿಯನ್ನು ಆರಿಸುತ್ತದೆ. ಲೋಕದಲ್ಲಿರುವ ಸರ್ವ ಶುಭಾಶುಭ ಭಾವಗಳನ್ನೂ ಕಾಲವೇ ಹುಟ್ಟಿಸಿತು. ಹುಟ್ಟಿಸಿದ ಎಲ್ಲವನ್ನೂ ಕಾಲವು
ನಾಶಗೊಳಿಸಿ ಪುನಃ ಸೃಷ್ಟಿಸುತ್ತದೆ. ಇರುವ ಎಲ್ಲದರಲ್ಲಿಯೂ ಕಾಲವು ಒಂದೇ ಸಮನೆ ಕೆಲಸಮಾಡುತ್ತಿರುತ್ತದೆ. ಹಿಂದೆ ನಡೆದ ಮತ್ತು
ಮುಂದೆ ನಡೆಯುವ ಎಲ್ಲವೂ ಕಾಲನಿರ್ಮಿತವಾದುದು  ಎಂದು ತಿಳಿದೂ ಶೋಕಿಸಿ ಬಳಲುವುದು ಸರಿಯಲ್ಲ!”

You might also like