You are on page 1of 2

ಭಾರತದ ಸಾಂಸ್ಕೃತಿಕ ವೈವಿಧ್ಯತೆ

“ಭಾರತ ಭೂಷಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ”


ಕವಿ ವಿಜಯ ನಾರಸಿಂಹ ಅವರ ರಚನೆಯ ಮೇಲಿನ ಹಾಡು ಎಲ್ಲರಿಗೂ ಚಿರಪರಿಚಿತ. “ಒಂದು
ದೇಶದ ಸೌಂದರ್ಯ ಆ ದೇಶದ ಜನರ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಅಡಗಿದೆ.” ಎಂಬುದು ಈ
ಹಾಡಿನಲ್ಲಿ ನಮಗೆ ಅರ್ಥವಾಗುತ್ತದೆ. ಭಾವ, ರಾಗ, ತಾಳಗಳು ಮೇಳೈಸಿದ ದೇಶವೇ ಭಾರತ.

ಪ್ರಾಚೀನ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ, ಹಲವು ಬಗೆಯ ಸಂಪ್ರದಾಯಗಳು ಹಾಗೂ


ವಿಚಾರ ಧಾರೆಗಳು ಮತ್ತು ಆಚರಣೆಗಳು ನಮ್ಮ ಭಾರತೀಯ ಸನಾತನ ಸಂಸ್ಕೃತಿಯನ್ನು
ರಚಿಸಿವೆ. ನಮ್ಮ ಸಂಸ್ಕೃತಿ ಸಿಂಧೂ ಕಣಿವೆ ನಾಗರಿಕತೆಯಿಂದ ಮೊದಲ್ಗೊಂಡು ಹಲವಾರು
ವಿಶೇಷವಾದ ಅಮೂಲ್ಯವಾದ ವಿಕಸನವನ್ನು ಕಂಡಿದೆ. ಭಾರತದ ವಿಶಿಷ್ಟ ಧಾರ್ಮಿಕ
ಆಚರಣೆಗಳು, ಹಲವಾರು ಭಾಷೆಗಳು ಅನನ್ಯವಾಗಿವೆ. ಅದಕ್ಕೇ ಇಂದಿಗೂ ಇಲ್ಲಿನ
ಸಂಸ್ಕೃತಿಯನ್ನು ಎಲ್ಲ ವಿದೇಶೀಯರು ಮೆಚ್ಚುತ್ತಾರೆ ಮತ್ತು ಇಷ್ಟ ಪಡುತ್ತಾರೆ. ಹಲವು
ವಿದೇಶೀಯರು ಇಲ್ಲಿನ ಸಂಸ್ಕೃತಿಯನ್ನು ಹಾಗೂ ಆಚರಣೆಯನ್ನು ತಾವೂ ಆಚರಿಸಿ ಸಂತಸ
ಪಡುತ್ತಾರೆ.
ಭಾರತದ ಸಾಂಸ್ಕೃತಿಕ ಪರಂಪರೆ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸಂಗೀತ,
ಭರತನಾಟ್ಯ, ಕಥಕ್ಕಳಿ, ಕೂಚುಪುಡಿ, ಕಥಕ್. . . . ಈ ರೀತಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಶಾಸ್ತ್ರೀಯ ಸಂಗೀತವು ಭಾರತದ ವಿಶೇಷವಾದ ಒಂದು ಸಾಂಸ್ಕೃತಿಕ ಕಲೆ. ಇದರಲ್ಲಿ ಎರಡು
ವಿಧಗಳಿವೆ. ಕರ್ನಾಟಕ ಸಂಗೀತ ಮತ್ತು ಹಿಂದುಸ್ಥಾನಿ ಸಂಗೀತ. ಇದು ಭಾರತದ ಜನರಲ್ಲಿ ಎಷ್ಟು
ಹಾಸು ಹೊಕ್ಕಾಗಿದೆ ಎಂದರೆ ಇದರಿಂದ ಜನರ ಆರೋಗ್ಯವು ಸರಿಹೊಂದುತ್ತದೆ ಎಂಬ
ನಂಬಿಕೆಯೂ ಇದೆ. ಮೇಘ ಮಲ್ಹಾರ ಎಂಬ ರಾಗದಿಂದ ಮಳೆಯೇ ಬಂದು ಬಿಡುತ್ತದೆ ಎಂಬ
ಬಲವಾದ ವಿಶ್ವಾಸ ನಮ್ಮ ದೇಶದ ಜನರಲ್ಲಿತ್ತು. ಮಾನಸಿಕ ನೆಮ್ಮದಿಯನ್ನು ಕೊಡುವ ನಮ್ಮ
ಶಾಸ್ತ್ರೀಯ ಸಂಗೀತ ನಿಜಕ್ಕೂ ಒಂದು ಅದ್ಭುತವೇ ಸರಿ. ಇನ್ನು ಜಾನಪದ ಹಾಡುಗಳು ಭಾರತದ
ನೆಲದ ಮೂಲೆ ಮೂಲೆಯಲ್ಲಿಯೂ ಮನೆ ಮಾಡಿದೆ. ತಬಲ, ಹಾರ್ಮೋನಿಯಂ, ಸಿತಾರ್, ವೀಣೆ
ಇತ್ಯಾದಿಗಳೊಂದಿಗೆ ಶಾಸ್ತ್ರೀಯ ಸಂಗಿತವನ್ನು ಹಾಡಲಾಗುತ್ತದೆ. ಇದನ್ನು ಹಾಡುವವರಿಗೆ ಬಡವ-
ಬಲ್ಲಿದ, ಮೇಲು-ಕೀಳು, ಜಾತಿ-ಮತಗಳು ಎಂಬ ಬೇಧಗಳಿಲ್ಲ. ಇದು ಭಾರತೀಯರ ಉತ್ತಮ
ಸಂಸ್ಕೃತಿಯ ಪ್ರತೀಕ.

ಭಾರತ ದೇಶದಲ್ಲಿ ಶಾಸ್ತ್ರೀಯ ನೃತ್ಯಗಳಲ್ಲಿ ಹಲವಾರು ವಿಧಗಳಿವೆ. ಭಾವ, ರಾಗ, ತಾಳದೊಂದಿಗೆ


ಅಭಿನಯ ಮಾಡುವ ಈ ಸುಂದರ ಕಲೆ ಭಾರತೀಯರಿಗೆ ಕರಗತ. ಯಕ್ಷಗಾನ ಎನ್ನುವ ಒಂದು
ಅದ್ಭುತ ಕಲೆ ಇಂದು ಬಹಳ ಪ್ರಸಿದ್ಧವಾಗಿದೆ. ಕಥಕ್ಕಳಿ ಕೇರಳ ರಾಜ್ಯದ ವಿಶೇಷ ಹಾಗೂ
ಅಪೂರ್ವವಾದ ಒಂದು ಕಲೆ. ಹೀಗೆ ಹೇಳುತ್ತಾ ವರ್ಣಿಸುತ್ತಾ ಹೋದರೆ ಪುಟಗಳೇ ಸಾಲದು.
ಆದ್ದರಿಂದ ಇದು ನಮ್ಮ ಸಂಸ್ಕ್ರತಿ ಎಂದು ಹೇಳಲು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ
ಪಡುತ್ತಾನೆ.
ನಿಜವಾದ ಒಂದು ಸಾಂಸ್ಕೃತಿಕ ವೈವಿಧ್ಯತೆಯನ್ನು ಭಾರತದಲ್ಲಿ ಆಚರಿಸುವ ಹಬ್ಬಗಳು
ತಿಳಿಸುತ್ತವೆ. ಭಾರತದ ಮೂಲೆ ಮೂಲೆಗಳಲ್ಲಿ ಜನರು ವಿವಿಧ ರೀತಿಯ ಹಬ್ಬಗಳನ್ನು
ಆಚರಿಸುತ್ತಾರೆ. ಕೆಲವು ಹಬ್ಬಗಳನ್ನು ಸಾರ್ವಜನಿಕವಾಗಿ ಒಟ್ಟಾಗಿ ಎಲ್ಲರೂ ಜತೆಯಲ್ಲಿ
ಆಚರಿಸಿದರೆ ಇನ್ನು ಕೆಲವು ಹಬ್ಬಗಳನ್ನು ಅವರವರು ಮನೆಯಲ್ಲೇ ಆಚರಿಸುತ್ತಾರೆ. ದೀಪಾವಳಿ,
ಈದ್, ಹೋಳಿ, ದಸರಾ, ಗಣೇಶ ಚತುರ್ಥಿ, ಬೈಸಾಕಿ, ದುರ್ಗಾಪೂಜೆ. . . ಹೀಗೆ ಹಲವಾರು
ರೀತಿಯ ಆಕರ್ಷಕ ಹಬ್ಬಗಳು ನಮ್ಮ ಜನಜೀವನವನ್ನು ಪ್ರಾಧಾನ್ಯತೆಯನ್ನು ಪಡೆಯುತ್ತವೆ.
ಇದರೊಂದಿಗೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಶಿಕ್ಷಕರ ದಿನಾಚರಣೆ ಈ ರೀತಿ
ಹಲವಾರು ರಾಷ್ಟ್ರೀಯ ಹಬ್ಬಗಳನ್ನೂ ಎಲ್ಲರೂ ಕೂಡಿ ಆಚರಿಸಲಾಗುತ್ತದೆ.
ಅತಿಥಿ ದೇವೋಭವ, ಮಾತೃ ದೇವೋ ಭವ, ಪಿತೃ ದೇವೋ ಭವ ಎನ್ನುವಂಥ ಹಲವಾರು
ಆದರ್ಶಗಳು ನಮ್ಮ ದಿನ ನಿತ್ಯದ ಜೀವನದಲ್ಲಿ ಆಚರಿಸುವಂತ ಸಂಸ್ಕೃತಿಯ ಪ್ರತೀಕಗಳು.
ಹಿರಿಯರ ಆಶೀರ್ವಾದವನ್ನು ಪಡೆದು, ಕಿರಿಯರನ್ನು ಪ್ರೀತಿಯಿಂದ ಕಂಡು, ಎಲ್ಲರನ್ನೂ
ಗೌರವಿಸುತ್ತಾ ಬಾಳುವುದು ನಮ್ಮ ದೇಶದ ಅತಿ ದೊಡ್ಡ ಸಂಸ್ಕೃತಿ. ಇದು ಯಾವುದೇ ಜಾತಿ
ಮತಗಳಿಗೆ ಸಂಬಂಧ ಪಟ್ಟಿಲ್ಲ. ಎಲ್ಲ ಭಾರತೀಯರಿಗೆ ಇದು ಕರಗತ. ನಮಸ್ಕಾರ ಎನ್ನುವಲ್ಲಿಂದ
ಪ್ರಾರಂಭವಾಗಿ ಸರ್ವೇ ಜನಾಃ ಸುಖಿನೋಭವಂತು ಎನ್ನುವಂಥ ನಮ್ಮ ದೇಶದ
ಸಂಸ್ಕೃತಿಯೊಂದಿಗೆ ಅತ್ಯಾಕರ್ಷಕ ಸಾಂಸ್ಕೃತಿಕ ವೈವಿಧ್ಯತೆ ಬೆಳೆದು ಬಂದಿದೆ ಎಂದರೆ
ತಪ್ಪಾಗಲಾರದು. ಇದನ್ನು ಉಳಿಸಿ ಬೆಳೆಸಿ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ.
ಶ್ರೀಲತಾ ಜಿ.ಯು.
6 ನೇ ಸೆಮಿಸ್ಟರ್
ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗ

You might also like