You are on page 1of 6

ಶಿಕ್ಷಣದಲ್ಲಿ ಲಿಂಗ ಸಂಬಂಧಿ ಪ್ರಶ್ನೆಗಳು ಅಥವಾ ಸಮಸ್ಯೆಗಳು

18 ಮತ್ತು 19ನೇ ಶತಮಾನಗಳಲ್ಲಿ ಚಾಲ್ತಿಯಲ್ಲಿದ್ದ ಕೆಲವು ಸಾಮಾಜಿಕ ಅನಿಷ್ಟಗಳೆಂದರೆ ಹೆಣ್ಣು ಶಿಶು ಹತ್ಯೆ, ವರದಕ್ಷಿಣೆ
ಪದ್ಧತಿ, ಬಾಲ್ಯವಿವಾಹ, ಸತಿಪದ್ಧತಿ, ಕೇಶಮಂಡನೆ, ದೇವದಾಸಿ, ಪರ್ದಾಪದ್ಧತಿ ಇತ್ಯಾದಿ.
ಶಿಕ್ಷಣ: 19ನೇ ಶತಮಾನದಲ್ಲಿ ಹಿಂದೂ ಸಮಾಜವು ಧಾರ್ಮಿಕ ಮೂಢನಂಬಿಕೆಗಳಿಂದ ಬಳಲುತ್ತಿದ್ದು, ಹಿಂದೂ ಧರ್ಮ
ಗ್ರಂಥಗಳು ಹೆಣ್ಣುಮಕ್ಕಳ ಶಿಕ್ಷಣವನ್ನು ಅನುಮೋದಿಸಲಿಲ್ಲ.
ಶಿಕ್ಷಣದ ಮೇಲೆ ಚಾರ್ಲ್ಸ್ ವುಡ್ ನ ವರದಿಯು ಸ್ತ್ರೀ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿತು. ವಿಶಾಲ ದೃಷ್ಟಿಕೋನದಲ್ಲಿ ಮಹಿಳೆಯ
ಶಿಕ್ಷಣವು ಸಮಾಜದಲ್ಲಿ ಮಹಿಳೆಯರ ಸ್ಥಿತಿಗಳನ್ನು ಸುಧಾರಿಸುವ ಸಾಮಾನ್ಯ ಅಭಿಯಾನದ ಒಂದು ಭಾಗವಾಯಿತು.
ಕ್ರಿಶ್ಚಿಯನ್ ಮಿಷನರಿಗಳು 1819ರಲ್ಲಿ ಕಲ್ಕತ್ತಾದಲ್ಲಿ ಮಹಿಳಾ ಬಾಲಾಪರಾಧಿ ಸಮಾಜವನ್ನು ಮೊದಲ ಬಾರಿಗೆ
ಸ್ಥಾಪಿಸಿದವು. 1856ರಲ್ಲಿ ಜಾರಿಗೊಳಿಸಿದ ಕಾನೂನು ವಿಧವಾ ಪುನರ್ ವಿವಾಹಕ್ಕೆ ಅನುಮತಿ ನೀಡಿತು. ಇದನ್ನು ಕಾಯಿದೆ
XV ಎಂದೂ ಕರೆಯುವರು.1860ರಲ್ಲಿ ಅಂಗೀಕರಿಸಲ್ಪಟ್ಟ ಕಾನೂನಿನಿಂದ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 10ಕ್ಕೆ
ಏರಿಸಲಾಯಿತು. 1872ರಲ್ಲಿ ಜಾರಿಯಾದ ಕಾನೂನು ಅಂತರ್ಜಾತಿ ವಿವಾಹ ಮತ್ತು ಅಂತರ್ ಧರ್ಮೀಯ ವಿವಾಹಕ್ಕೆ
ಅನುಮತಿ ನೀಡಿತು. 1891ರಲ್ಲಿ ಜಾರಿಯಾದ ಮತ್ತೊಂದು ಕಾನೂನು ಬಾಲ್ಯವಿವಾಹವನ್ನು ನಿಷೇಧಿಸುವ ಉದ್ದೇಶ
ಹೊಂದಿತ್ತು. ಬಾಲ್ಯವಿವಾಹವನ್ನು ತಡೆಗಟ್ಟಲು ಶಾರದಾ ಕಾಯ್ದೆಯನ್ನು 1929ರಲ್ಲಿ ಅಂಗೀಕರಿಸಲಾಯಿತು. ಈ ಕಾಯ್ದೆಯು
ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 14ಕ್ಕೆ ಮತ್ತು ಗಂಡು ಮಕ್ಕಳ ವಯಸ್ಸನ್ನು 18ಕ್ಕೆ ಹೆಚ್ಚಿಸಿತು. ನಂತರ 1949ರಲ್ಲಿ
ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 15ಕ್ಕೆ ಹೆಚ್ಚಿಸಲಾಯಿತು. 1978ರಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಮದುವೆಯ
ವಯಸ್ಸನ್ನು ಕ್ರಮವಾಗಿ 18 ಮತ್ತು 21 ವರ್ಷಗಳಿಗೆ ಹೆಚ್ಚಿಸಲಾಯಿತು.ಕೆಲವು ಸುಧಾರಕರನ್ನು ಬ್ರಿಟಿಷ್ ಅಧಿಕಾರಿಗಳು
ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಬೆಂಬಲಿಸಿದರೆ, ಇನ್ನೂ ಕೆಲವು ಸುಧಾರಕರು ಬ್ರಿಟಿಷ್ ಸರ್ಕಾರ ರೂಪಿಸಿದ ಸುಧಾರಣಾ
ಕ್ರಮಗಳು ಮತ್ತು ನಿಬಂಧನೆಗಳನ್ನು ಬೆಂಬಲಿಸಿದರು.

ರಾಜಾರಾಮ್ ಮೋಹನ್ ರಾಯ್


ರಾಜಾರಾಮ್ ಮೋಹನ್ ರಾಯ್ ಅವರನ್ನು 'ಭಾರತೀಯ ಪುನರುಜ್ಜೀವನದ ಪಿತಾಮಹ' ಹಾಗೂ 'ಭಾರತೀಯ
ಪುನರುಜ್ಜೀವನದ ಧ್ರುವತಾರೆ' ಎಂದು ಕರೆಯಲಾಗುತ್ತಿತ್ತು. ರಾಮಾಕಾಂತ್ ರಾಯ್ ಮತ್ತು ತಾರಿಣಿದೇವಿ ಅವರ ತಂದೆ
ತಾಯಿಗಳು. ಅವರು ಮೇ 22, 1772ರಲ್ಲಿ ಬಂಗಾಳದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು 1815ರಲ್ಲಿ
ಆತ್ಮೀಯಸಭಾ ಮತ್ತು 1828 ಆಗಸ್ಟ್ 20ರಂದು ಬ್ರಹ್ಮಸಮಾಜವನ್ನು ಸ್ಥಾಪಿಸಿದರು. ಈ ಸಂಘಟನೆ ಅಥವಾ ಸಂಸ್ಥೆಗಳ
ಮೂಲಕ ಅವರು ಸಂಪ್ರದಾಯಸ್ಥ ಹಿಂದೂಗಳ ವಿರುದ್ಧ ಹೋರಾಡಿದರು. ಅವರು ಸತಿವ್ಯವಸ್ಥೆ, ಬಹುಪತ್ನಿತ್ವ, ಬಾಲ್ಯವಿವಾಹ,
ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ವಿರೋಧಿಸಿದರು. ಅವರು ಅಂತರ್ಜಾತಿ ವಿವಾಹ, ಮಹಿಳಾ ಶಿಕ್ಷಣ, ವಿಧವಾ ಪುನರ್
ವಿವಾಹದ ದೊಡ್ಡ ಬೆಂಬಲಿಗರಾಗಿದ್ದರು. ಮೋಹನ್ ರಾಯ್ ರವರು ಕೇವಲ ಧಾರ್ಮಿಕ ಸುಧಾರಕರಾಗಿರಲಿಲ್ಲ, ಸಾಮಾಜಿಕ
ಸುಧಾರಕರೂ ಆಗಿದ್ದರು.1829ರಲ್ಲಿ ವಿಲಿಯಮ್ ಬೆಂಟಿಕ್ ನ ಸಹಾಯದೊಂದಿಗೆ ಸತಿಪದ್ಧತಿಯ ನಿರ್ಮೂಲನೆ ಅವರ ದೊಡ್ಡ
ಸಾಧನೆಯಾಗಿದೆ. ಸತಿಪದ್ಧತಿಯ ಆಚರಣೆಯು ಹಿಂದೂ ಮಹಿಳೆಯರ ಸ್ಥಾನವು ಕೆಳಮಟ್ಟದಲ್ಲಿರುವುದರಿಂದ ಎಂಬುದನ್ನು
ಅರಿತುಕೊಂಡರು. ಆದ್ದರಿಂದ ಅವರು ಮಹಿಳಾ ಹಕ್ಕುಗಳ ದೃಢ ಬೆಂಬಲಿಗರಾಗಿ ಕಾರ್ಯನಿರ್ವಹಿಸಿದರು.
ಅವರು ಸತಿಪದ್ಧತಿಯ ಆಚರಣೆಯನ್ನು ನಿಷೇಧಿಸಲು ಹಲವು ವರ್ಷಗಳ ಕಾಲ ಶ್ರಮಿಸಿದರು.1818ರ ಆರಂಭದಲ್ಲಿ ಅವರು
ಸತಿಪದ್ಧತಿಯ ಆಚರಣೆ ವಿರುದ್ಧ ಸಾರ್ವಜನಿಕರ ಮನವೊಲಿಸಲು ಹೊರಟರು. ಒಂದು ಕಡೆ ಅವರು ಹಿಂದೂ ಧರ್ಮದ
ಪ್ರಾಚೀನ ಪವಿತ್ರ ಪುಸ್ತಕಗಳ ಅಧಿಕಾರವನ್ನು ಉದಾಹರಿಸಿ ತೋರಿಸಿದರು ಹಾಗೂ ಮತ್ತೊಂಡೆ ಜನರಲ್ಲಿ ಮಾನವೀಯತೆ
ಮತ್ತು ಸಹಾನುಭೂತಿಗಾಗಿ ಮನವಿ ಮಾಡಿದರು. ಅವರು ಕಲ್ಕತ್ತಾದ ಉಷ್ಣತೆಯಿಂದ ಕೂಡಿದ ಘಟ್ಟಗಳಿಗೆ ಭೇಟಿ ನೀಡಿ,
ವಿಧವೆಯರ ಸಂಬಂಧಿಕರಿಗೆ ಅವರ ಸ್ವಯಂ ಆತ್ಮಾಹುತಿಯ ಯೋಜನೆಯನ್ನು ಕೈ ಬಿಡುವಂತೆ ಮನವೊಲಿಸಲು
ಪ್ರಯತ್ನಿಸಿದರು.
ಸತಿ ಪದ್ಧತಿಯ ಆಚರಣೆಯ ವಿರುದ್ಧ ಅವರ ಅಭಿಯಾನದಿಂದ ಸಂಪ್ರದಾಯಸ್ಥ ಹಿಂದೂಗಳ ವಿರೋಧವನ್ನು
ಕಟ್ಟಿಕೊಂಡರು, ಅವರು ತೀವ್ರವಾಗಿ ಹಲ್ಲೆ ಮಾಡಲೂ ಮುಂದಾದರು. ಮೋಹನ್ ರಾಯ್ ರವರು ಬಹುಪತ್ನಿತ್ವ ಮತ್ತು
ಬಾಲ್ಯವಿವಾಹವನ್ನು ರದ್ದುಗೊಳಿಸುವಂತೆ ಪ್ರತಿಪಾದಿಸಿದರು, ಮಹಿಳೆಯರಿಗೆ ಶಿಕ್ಷಣ ನೀಡಬೇಕು ಮತ್ತು ಪಿತ್ರಾರ್ಜಿತ
ಆಸ್ತಿಯನ್ನು ಪಡೆಯುವ ಹಕ್ಕನ್ನು ನೀಡಬೇಕೆಂದು ಪ್ರತಿಪಾದಿಸಿದರು. ಅವರು ಮಹಿಳೆಯರನ್ನು ಅಧೀರನನ್ನಾಗಿಸುವುದನ್ನು
ಖಂಡಿಸಿದರು ಮತ್ತು ಮಹಿಳೆಯರು ಬುದ್ಧಿಶಕ್ತಿ ಅಥವಾ ನೈತಿಕತೆಯಲ್ಲಿ ಪುರುಷರಿಗಿಂತ ಕೆಳಮಟ್ಟದಲ್ಲಿದ್ದಾರೆ ಎಂಬ
ವಿಚಾರಗಳನ್ನು ವಿರೋಧಿಸಿದರು. ಅವರು ವಿಧವೆಯರ ಪುನರ್ ವಿವಾಹದ ಹಕ್ಕುಗಳನ್ನು ಪ್ರತಿಪಾದಿಸಿದರು.

ಜ್ಯೋತಿರಾವ್ ಗೋವಿಂದರಾವ್ ಫುಲೆ


ಮಹಾತ್ಮ ಜ್ಯೋತಿಬಾ ಫುಲೆ ಏಪ್ರಿಲ್ 11,1827ರಂದು ಸತಾರ ಜಿಲ್ಲೆಯಲ್ಲಿ ಜನಿಸಿದರು. ಅವರು ಮಾಲಿ
ಸಮುದಾಯದವರು. ಅವರ ತಂದೆ ಪೂನದಲ್ಲಿ ತರಕಾರಿ ಮಾರಾಟಗಾರರಾಗಿದ್ದರು. ಅವರ ತಾಯಿ ಒಂದು ವರ್ಷದ
ಮಗುವಾಗಿದ್ದಾಗ ತೀರಿಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಜ್ಯೋತಿಬಾ ಫುಲೆ ಶಾಲೆಯನ್ನು ಬಿಟ್ಟು
ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಮೂಲಕ ತಂದೆಯ ಸಹಾಯಕ್ಕೆ ನಿಂತರು.1841ರಲ್ಲಿ ಅವರು ಪೂನಾದಲ್ಲಿನ ಸ್ಕಾಟಿಷ್
ಮಿಷನ್ ಪ್ರೌಢಶಾಲೆಯಲ್ಲಿ ಪ್ರವೇಶ ಪಡೆದರು. ಅವರು ತನ್ನ ಬ್ರಾಹ್ಮಣ ಸ್ನೇಹಿತನ ಆಹ್ವಾನದ ಮೇರೆಗೆ ಮುದುವೆಗೆ ಹೋದಾಗ
ನೋವಿನ ಅನುಭವವಾಯಿತು. ಜ್ಯೋತಿಬಾ ಬ್ರಾಹ್ಮಣರಿಂದ ಕೀಳು ಎಂದು ಪರಿಗಣಿಸಲ್ಪಟ್ಟ ಮಾಲಿ ಜಾತಿಗೆ ಸೇರಿದವನೆಂದು
ತಿಳಿದಿದ್ದರಿಂದ, ಮದುಮಗನ ಸಂಬಂಧಿಕರು ಅವಮಾನಿಸಿ ನಿಂದಿಸಿದರು. ಈ ಘಟನೆಯ ನಂತರ ಅವರು ಜಾತಿ ವ್ಯವಸ್ಥೆಯನ್ನು
ಧಿಕ್ಕರಿಸಲು ಮತ್ತು ಜಾತಿ ವ್ಯವಸ್ಥೆಯಡಿಯಲ್ಲಿ ತಮ್ಮ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಿರುವ ಶೂದ್ರರಿಗೆ ಸೇವೆ ಸಲ್ಲಿಸಲು
ಮನಸ್ಸು ಮಾಡಿದರು. ಜ್ಯೋತಿರಾವ್ ಫುಲೆ ತಮ್ಮ ಜೀವನದ ಉದ್ದಕ್ಕೂ ದೀನ-ದಲಿತರ ವಿಮೋಚನೆ ಮತ್ತು ಹಕ್ಕುಳಿಗಾಗಿ
ಹೋರಾಡಿದರು. ಅದನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭಿಸಿದರು.
19ನೇ ಶತಮಾನದಲ್ಲಿ ಭಾರತದ ಮಹಾರಾಷ್ಟ್ರದ ಪ್ರಮುಖ ಕಾರ್ಯಕರ್ತ, ಚಿಂತಕ ಮತ್ತು ಸಾಮಾಜಿಕ ಸುಧಾರಕರಾಗಿದ್ದ
ಫುಲೆ, ಮಹಾತ್ಮ ಜ್ಯೋತಿಬಾ ಫುಲೆ ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದರು. ಅವರು ಮಹಾರಾಷ್ಟ್ರದ ವಿಧವಾ ಪುನರ್
ವಿವಾಹದ ಚಳುವಳಿಯ ಪ್ರವರ್ತಕರಾಗಿದ್ದರು. ಅವರು ಬ್ರಾಹ್ಮಣರ ಪ್ರಾಬಲ್ಯವನ್ನು ಪ್ರಶ್ನಿಸಿದರು ಮತ್ತು ಜನಸಾಮಾನ್ಯರನ್ನು
ಸಂಘಟಿಸಲು ಮತ್ತು ಸಕ್ರಿಯಗೊಳಿಸಲು ಶ್ರಮಿಸಿದರು. ಅವರು ಗ್ರಾಮೀಣ ಪ್ರದೇಶದ ಜನರ ಹಿತದೃಷ್ಟಿಯನ್ನು ಸಾಧಿಸಿದರು
ಮತ್ತು ಗ್ರಾಮೀಣಾಭಿವೃದ್ಧಿಗಾಗಿ (ಮಹಾರಾಷ್ಟ್ರ) ಸಕ್ರಿಯವಾಗಿ ಕೆಲಸ ಮಾಡಿದರು. ಜ್ಯೋತಿಬಾ ಅವರಿಗೆ
ತುಳಿತಕ್ಕೊಳಗಾದವರಿಗಾಗಿ ಧ್ವನಿಯೆತ್ತಿದ ಉದ್ದೇಶಕ್ಕಾಗಿ 'ಮಹಾತ್ಮ' ಎಂಬ ಬಿರುದನ್ನು ಮಹಾರಾಷ್ಟ್ರದ ಸಾಮಾಜಿಕ
ಪ್ರವರ್ತಕರಾಗಿದ್ದ ವಿಠ್ಠಲ್ ರಾವ್ ಕೃಷ್ಣಾಜಿ ವಾಂಡೇಕರ್ 1888ರಲ್ಲಿ ನೀಡಿದರು.
ಜ್ಯೋತಿಬಾ ಫುಲೆ 1873ರಲ್ಲಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು ಈ ಸಂಸ್ಥೆಯ ಮುಖ್ಯ ಗುರಿ
ಮೇಲ್ವರ್ಗದವರಿಂದ ಕೆಲವರ್ಗದವರ ಶೋಷಣೆಯನ್ನು ತಡೆಯುವುದು. ಅವರು ಮಹಿಳಾ ಶಿಕ್ಷಣವನ್ನು ತಮ್ಮ ಪತ್ನಿ
ಸಾವಿತ್ರಿಬಾಯಿ ಶಿಕ್ಷಣದಿಂದಲೇ ಪ್ರಾರಂಭಿಸಿದರು ಮತ್ತು ಶಾಲೆಯಲ್ಲಿ ಬೋಧಿಸಲು ತರಬೇತಿ ನೀಡಿದರು. ಅವರು 1848ರಲ್ಲಿ
ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆಯನ್ನು ಪ್ರಾರಂಭಿಸಿದರು. ದೀನ ದಲಿತರ ಸಮುದಾಯಗಳ ಮತ್ತು ವಯಸ್ಕ
ಮಹಿಳಾ ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರತಿಪಾದಿಸಿದರು. ಅವರು ಅವರು 'ಪುಣೆ ಮಹಿಳಾ ಸ್ಥಳೀಯ ಶಾಲೆಗಳು' ಮತ್ತು
'ಮಹಾರ್, ಮಾಂಗ್ಸ್ ಸಮುದಾಯದ ಶಿಕ್ಷಣ ಉತ್ತೇಜಕ ಸಮಾಜ ಸಂಸ್ಥೆ'ಗಳನ್ನು ಸ್ಥಾಪಸಿದರು.
ಮನೆಯಲ್ಲಿ ಸಮಾನತೆಯ ಮೌಲ್ಯವನ್ನು ತರುವ ಸಲುವಾಗಿ ಮಹಿಳೆಯರಿಗೆ ಮೊದಲು ಶಿಕ್ಷಣ ನೀಡುವ ಉದ್ದೇಶದಿಂದ
ಬಾಲಕಿಯರ ಶಾಲೆಯಲ್ಲಿ ಕಲಿಸಲು ಜ್ಯೋತಿಬಾ ಫುಲೆ ತನ್ನ ಪತ್ನಿ ಸಾವಿತ್ರಿಬಾಯಿಯನ್ನು ತರಬೇತಿಗೊಳಿಸಿದರು.
ಬಾಲಕಿಯರಿಗೆ ಮತ್ತು ಶಾಲೆಯಲ್ಲಿನ ದೀನ ದಲಿತ ಗುಂಪುಗಳ ಜನರಿಗೆ ಕಲಿಸಲು ಸಾವಿತ್ರಿಬಾಯಿಯವರಿಗೆ ಆ ಕಾಲದ
ಸಾಂಪ್ರದಾಯಿಕ ಸಮಾಜದಿಂದ ತೀವ್ರ ವಿರೋಧವಿತ್ತು. ಈ ವಿರೋಧದ ಹೊರತಾಗಿಯೂ ಜ್ಯೋತಿಬಾ ಫುಲೆ ಮತ್ತು
ಸಾವಿತ್ರಿಬಾಯಿ ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮುಂದುವರೆಸಿದರು. ಅವರು ವಿಧವಾ ಪುನರ್ ವಿವಾಹವನ್ನು
ಪ್ರತಿಪಾದಿಸಿದರು ಮತ್ತು ಅವರಿಗಾಗಿ ಒಂದು ಮನೆಯನ್ನು ಪ್ರಾರಂಭಿಸಿದರು. ಆ ಸಮಯದಲ್ಲಿ ವಿಧವಾ ಪುನರ್ ವಿವಾಹವನ್ನು
ನಿಷೇಧಿಷಲಾಗಿತ್ತು ಮತ್ತು ಹಿಂದೂ ಸಮಾಜದಲ್ಲಿ ಬಾಲ್ಯ ವಿವಾಹ ಸಾಮಾನ್ಯವಾಗಿತ್ತು. ಶಿಶುಹತ್ಯೆ ಮತ್ತು ಆತ್ಮಹತ್ಯೆಗಳನ್ನು
ತಡೆಗಟ್ಟಲು ಅವರು 1863ರಲ್ಲಿ ನವಜಾತ ಶಿಶುಗಳಿಗೆ ಒಂದು ಮನೆಯನ್ನು ತೆರೆದರು.
ಜ್ಯೋತಿಬಾ ಫುಲೆ ವಿಧವಾ ಪುನರ್ ವಿವಾಹವನ್ನು ಪ್ರತಿಪಾದಿಸಿ 1854ರಲ್ಲಿ ಮೇಲ್ಜಾತಿಯ ವಿಧವೆಯವರಿಗೆ ವಸತಿ
ವ್ಯವಸ್ಥೆಯನ್ನು ಕಲ್ಪಿಸಿದರು.

ಸಾವಿತ್ರಿಬಾಯಿ ಫುಲೆ
ಸಾವಿತ್ರಿಬಾಯಿ ಫುಲೆ ಭಾರತೀಯ ಸಾಮಾಜಿಕ ಸುಧಾರಕಿ, ಶಿಕ್ಷಣ ತಜ್ಞೆ ಮತ್ತು ಮಹಾರಾಷ್ಟ್ರದ ಕವಯಿತ್ರಿ. ಅವರನ್ನು
ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಪರಿಗಣಿಸಲಾಗಿದೆ. ಪತಿ ಜ್ಯೋತಿರಾವ್ ಫುಲೆ ಜೊತೆಗೆ ಭಾರತದಲ್ಲಿ ಮಹಿಳೆಯರ
ಹಕ್ಕುಗಳನ್ನು ಸುಧಾರಿಸುವಲ್ಲಿ ಅವರು ಪಾತ್ರ ವಹಿಸಿದ್ದಾರೆ. ಅವರನ್ನು ಸ್ತ್ರೀವಾದದ ತಾಯಿಯೆಂದು ಪರಿಗಣಿಸಲಾಗಿದೆ.
ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿಬಾ 1848ರಲ್ಲಿ ಪುಣೆಯ ಭೀಡೆವಾಡದಲ್ಲಿ ಮೊದಲ ಭಾರತೀಯ ಬಾಲಕಿಯರ
ಶಾಲೆಯನ್ನು ಸ್ಥಾಪಿಸಿದರು. ಅವರು ಜಾತಿ ಮತ್ತು ಲಿಂಗವನ್ನು ಆಧರಿಸಿದ ಜನರ ತಾರತಮ್ಯ ಮತ್ತು ಅನುಚಿತ ವರ್ತನೆಯನ್ನು
ರದ್ದುಗೊಳಿಸಲು ಕೆಲಸ ಮಾಡಿದರು. ಅವರನ್ನು ಮಹಾರಾಷ್ಟ್ರದ ಸಾಮಾಜಿಕ ಸುಧಾರಣಾ ಚಳುವಳಿಯ ಪ್ರಮುಖ ವ್ಯಕ್ತಿಯೆಂದು
ಪರಿಗಣಿಸಲಾಗಿದೆ.
ಸಾವಿತ್ರಿಬಾಯಿ ಫುಲೆಯವರು ಒಂದು ಶ್ರೀಮಂತ ರೈತ ಕುಟುಂಬದಲ್ಲಿ ಜನವರಿ 03,1831ರಲ್ಲಿ ಸತಾರ ಜಿಲ್ಲೆಯ
ನೈಗಾನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಖಂಡೋಜಿ ನವ್ಸೆ ಪಾಟೀಲ್ ಮತ್ತು ಲಕ್ಷ್ಮೀಬಾಯಿ ಅವರ ತಂದೆ ತಾಯಿಗಳು.
ಅವರು ಒಂಭತ್ತರ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಜ್ಯೋತಿಬಾ ಫುಲೆಯನ್ನು ವಿವಾಹವಾದರು.
ಸಾವಿತ್ರಿಬಾಯಿ ಕವಯಿತ್ರಿಯೂ ಆಗಿದ್ದು ಮರಾಠಿ ಕಾವ್ಯದ ಪ್ರವರ್ತಕರೆಂದು ಪರಿಗಣಿಸಲ್ಪಟ್ಟಿದ್ದರು. ಜ್ಯೋತಿರಾವ್
ಫುಲೆಯವರ ಸಮಾಜ ಸುಧಾರಣಾ ಸಂಸ್ಥೆಗೆ ಸೇರಲು ಕೆಲವು ಮಹಿಳಾ ಶಿಕ್ಷಕರ ಅಗತ್ಯವಿತ್ತು. ಆದ್ದರಿಂದ ಅವರು ತಮ್ಮ ಪತ್ನಿಗೆ
ಶಿಕ್ಷಕಿಯಾಗಲು ಬೋಧಿಸಿದರು ಮತ್ತು ತರಬೇತಿ ನೀಡಿದರು. ಅವರನ್ನು ತರಬೇತಿ ಶಾಲೆಗೆ ಸೇರಿಸಿದರು. ಅದರಲ್ಲಿ ಅವರು
ಯಶಸ್ವಿಯಾಗಿ ತೇರ್ಗಡೆಯಾದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ,1848ರಲ್ಲಿ ಪುಣೆಯಲ್ಲಿ
ಬಾಲಕಿಯರಿಗಾಗಿ ಒಂದು ಶಾಲೆಯನ್ನು ತೆರೆದರು. ಆರಂಭದಲ್ಲಿ ಒಂಭತ್ತು ಹುಡುಗಿಯರು ವಿದ್ಯಾರ್ಥಿಗಳಾಗಿ ದಾಖಲಾದರು
ಮತ್ತು ಅವರು ವಿವಿಧ ಜಾತಿಗಳಿಗೆ ಸೇರಿದವರಾಗಿದ್ದರು.
1852ರಲ್ಲಿ ಅವರು ಅಸ್ಪೃಶ್ಯ ಹುಡುಗಿಯರಿಗಾಗಿ ಶಾಲೆಯನ್ನು ತೆರೆದರು. ಸಮಾಜದ ಎಲ್ಲಾ ವಿರೋಧಗಳ ನಡುವೆಯೂ
ಬಾಲಕಿಯರಿಗೆ ಬೋಧಿಸುವುದನ್ನು ಸಾವಿತ್ರಿಬಾಯಿ ಮುಂದುವರೆಸಿದರು. ಸಾವಿತ್ರಿಬಾಯಿ ಫುಲೆಯವರು ತಮ್ಮ ಶಾಲೆಗೆ
ಹೋಗುವಾಗ ಜೊತೆಯಲ್ಲಿ ಒಂದು ಹೆಚ್ಚುವರಿ ಸೀರೆಯನ್ನು ಕೊಂಡೊಯ್ಯುತ್ತಿದ್ದರು. ಏಕೆಂದರೆ ಅವರು ಮೇಲ್ವರ್ಗದ
ಮಹಿಳೆಯರಿಂದ ಕಲ್ಲು, ಸಗಣಿಯಿಂದ ಹಲ್ಲೆಗೆ ಒಳಗಾಗುತ್ತಿದ್ದುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಲ್ಪಡುತ್ತಿದ್ದರು. ಫುಲೆ
ದಂಪತಿಗಳು ಕೆಳವರ್ಗಕ್ಕೆ ಸೇರಿದ್ದರಿಂದ ಮೇಲ್ವರ್ಗದವರಿಂದ ತಾವು ವಿರೋಧವನ್ನು ಎದುರಿಸಬೇಕಾಯಿತು. ಶೂದ್ರ
ಸಮುದಾಯದವರಿಗೆ ಸಾವಿರಾರು ವರ್ಷಗಳಿಂದ ಶಿಕ್ಷಣ ನಿರಾಕರಿಸಲಾಗಿತ್ತು. ಈ ಕಾರಣಕ್ಕಾಗಿ ಅನೇಕ ಬ್ರಾಹ್ಮಣರು ಫುಲೆ
ದಂಪತಿಗಳ ಕೆಲಸವನ್ನು ವಿರೋಧಿಸಿದರು ಮತ್ತು ದುಷ್ಟರೆಂದು ಹಣೆಪಟ್ಟಿ ಕಟ್ಟಿದರು. ಈ ಘಟನೆಗಳಿಂದ ಸಾವಿತ್ರಿಬಾಯಿ ಫುಲೆ
ಆತ್ಮಸ್ಥೈರ್ಯವನ್ನು ಕಳೆದುಕೊಂಡರು. ಆದರೆ ಪತಿಯ ಬೆಂಬಲದಿಂದಾಗಿ ತಮ್ಮ ಕಾರ್ಯವನ್ನು ಮುಂದುವರಿಸಿದರು.
ನಿಧಾನವಾಗಿ ಮತ್ತು ಕ್ರಮೇಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅಂತಿಮವಾಗಿ, ಬ್ರಿಟಿಷ್ ಸರ್ಕಾರವು
ಸಾವಿತ್ರಿಬಾಯಿ ಫುಲೆಯವರನ್ನು ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಿತು. ಒಮ್ಮೆ ಜ್ಯೋತಿಬಾ ಫುಲೆ ಗರ್ಭಿಣಿ ವಿಧವೆ
ಮಹಿಳೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಪ್ಪಿಸಿದರು ಮತ್ತು ಮಗು ಜನಿಸಿದ ಮೇಲೆ ತನ್ನ ಹೆಸರನ್ನು ನೀಡುವುದಾಗಿ
ಭರವಸೆ ನೀಡಿದರು. ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ಆ ಮಗುವನ್ನು ದತ್ತು ತೆಗೆದುಕೊಂಡು ಅವನಿಗೆ
ಯಶವಂತರಾವ್ ಎಂದು ಹೆಸರಿಟ್ಟರು. ಅವನು ಬೆಳೆದು ವೈದ್ಯನಾದನು. ಈ ಘಟನೆಯು ದಂಪತಿಗಳು ಸಮಾಜದಲ್ಲಿನ
ವಿಧವೆಯರಿಗೆ ಸೇವೆ ಸಲ್ಲಿಸಲು ಗಂಭೀರ ಕ್ರಮಗಳನ್ನು ಕೈಗೊಳುವಂತೆ ಮಾಡಿತು.
1852ರಲ್ಲಿ ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಶಿಕ್ಷಣ ಕ್ಷೇತ್ರದಲ್ಲಿನ ಅಸಾಮಾನ್ಯ ಸೇವೆಗಾಗಿ ಸನ್ಮಾನಿಸಿತು.
ಅವರ ಕವಿತೆಗಳ 2 ಪುಸ್ತಕಗಳು (ಕಾವ್ಯಾ ಫುಲೆ ಮತ್ತು ಭವನ್ ಕಾಶಿ ಶುಭೋದ್ ರತ್ನಾಕರ್) ಮರಣೋತ್ತರವಾಗಿ
ಪ್ರಕಟವಾದವು. ಮಹಿಳಾ ಸಾಮಾಜಿಕ ಸುಧಾರಕರನ್ನು ಗುರ್ತಿಸಲು ಮಹಾರಾಷ್ಟ್ರ ಸರ್ಕಾರವು ಅವರ ಹೆಸರಿನಲ್ಲಿ
ಪ್ರಶಸ್ತಿಯನ್ನು ಸ್ಥಾಪಿಸಿದೆ. 2015ರಲ್ಲಿ ಪುಣೆ ವಿಶ್ವವಿದ್ಯಾಲಯವು ಅವರ ಗೌರವಾರ್ಥವಾಗಿ ಸಾವಿತ್ರಿಬಾಯಿ ಫುಲೆ ಪುಣೆ
ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು. ಮಾರ್ಚ್ 10,1998ರಂದು ಫುಲೆ ಗೌರವಾರ್ಥವಾಗಿ ಅಂಚೆ ಚೀಟಿ
ಬಿಡುಗಡೆ ಮಾಡಿತು.

ರಘುನಾಥ್ ಧೋoಡೋ ಕಾರ್ವೆ


ರಘುನಾಥ್ ಧೋoಡೋ ಕಾರ್ವೆ 1882ರ ಜನವರಿ 14ರಂದು ದಾಪೋಲಿ ಜಿಲ್ಲೆಯ (ಮಹಾರಾಷ್ಟ್ರ) ಮುರುದ್ ಎಂಬಲ್ಲಿ
ಚಿಟ್ಪವನ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರು ಭಾರತರತ್ನ ಮಹರ್ಷಿ ಧೋ0ಡೋ ಕೇಶವ್ ಕಾರ್ವೆಯವರ ಹಿರಿಯ
ಮಗ. ಅವರ ತಾಯಿ ರಾಧಾಭಾಯಿ 1891ರಲ್ಲಿ ಹೆರಿಗೆ ಸಮಯದಲ್ಲಿ ಕಾರ್ವೆ ಒಂಭತ್ತು ವರ್ಷದವರಿದ್ದಾಗ ನಿಧನರಾದರು.
ಇದು ಅವರನ್ನು ಗರ್ಭಧಾರಣೆಯ ಸಮಸ್ಯೆಗಳ ವಿಚಾರದಲ್ಲಿ ಕೆಲಸ ಮಾಡುವಂತೆ ಮಾಡಿತು.
ಕಾರ್ವೆ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಮಹಾರಾಷ್ಟ್ರದ ಸಾಮಾಜಿಕ ಸುಧಾರಕರಾಗಿದ್ದರು. ಅವರು
1921ರಲ್ಲಿ ಮುಂಬಯಿಯಲ್ಲಿ ಜನರಿಗಾಗಿ ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ಚಿಕಿತ್ಸಾಲಯವನ್ನು
ಪ್ರಾರಂಭಿಸುವಲ್ಲಿ ಪ್ರವರ್ತಕರಾಗಿದ್ದರು.
ಅವರು ಪುಣೆಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದರು. ಅವರು 1899ರಲ್ಲಿ ನಡೆದ ಮೆಟ್ರಿಕ್ಯುಲೇಷನ್
ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದರು. ಅವರು ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಸ್ನಾತಕೋತ್ತರ ಕಲಾ (ಎಂ.ಎ)
ಪದವಿಯನ್ನು ಪಡೆದರು. ಮುಂಬೈನ ವಿಲ್ಸನ್ ಕಾಲೇಜಿನಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು
ಆರಂಭಿಸಿದರು. ಅವರು ಕುಟುಂಬ ಯೋಜನೆ, ಜನಸಂಖ್ಯಾ ನಿಯಂತ್ರಣ, ಮತ್ತು ಮಹಿಳೆಯರ ಹಕ್ಕಿನ ಬಗೆಗಿನ ತಮ್ಮ
ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಪ್ರಾರಂಭಿಸಿದಾಗ ಕಾಲೇಜಿನ ಸಂಪ್ರದಾಯವಾದಿ ಕ್ರಿಶ್ಚಿಯನ್
ಆಡಳಿತಗಾರರು ಅವರನ್ನು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದರು. ಅವರು ಜನನ ನಿಯಂತ್ರಣ ಮತ್ತು
ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಕಾರಣಗಳಿಗಾಗಿ ತನ್ನನ್ನು ತೊಡಗಿಸಿಕೊಳ್ಳಲು ಯಶಸ್ವೀ ಶೈಕ್ಷಣಿಕ
ವೃತ್ತಿಜೀವನವನ್ನು ತ್ಯಾಗ ಮಾಡಿದರು.
ಲಂಡನ್ ನಲ್ಲಿ ಮೊಟ್ಟ ಮೊದಲ ಜನನ ನಿಯಂತ್ರಣ ಚಿಕಿತ್ಸಾಲಯವನ್ನು ತೆರೆದ ವರ್ಷದಲ್ಲೇ ಅವರು ತಮ್ಮ ಮೊದಲ
ಹೆಜ್ಜೆಯಾಗಿ 1921ರಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಜನನ ನಿಯಂತ್ರಣ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು.
ಸಂತಾನೋತ್ಪತ್ತಿ ಅರೋಗ್ಯ ಸಮಸ್ಯೆಗಳ ಬಗ್ಗೆ ಸ್ವಲ್ಪ ಮಟ್ಟದ ತಿಳುವಳಿಕೆ ಇದ್ದರೂ, ಲೈಂಗಿಕತೆಯ ಬಗ್ಗೆ ಮುಕ್ತ ಚರ್ಚೆ
ನಿಷೇಧವಾಗಿದ್ದ ಸಮಯದಲ್ಲಿ ಅವರ ಕೊಡುಗೆ ಕ್ರಾಂತಿಕಾರಿ ಮತ್ತು ಅಗತ್ಯವಾದುದು ಎಂದು ಸಾಬೀತುಪಡಿಸುತ್ತದೆ. ಅವರ
ಪ್ರಯತ್ನಗಳು ಅವರಿಗೆ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾರ್ವಜನಿಕ ಅವಮಾನಕ್ಕೆ ಕಾರಣವಾಯಿತು.
ಕಾರ್ವೇಯವರು ಜುಲೈ 15,1927 ರಿಂದ 1953 ರವರೆಗೆ 'ಸಮಾಜ ಸ್ವಾಸ್ತ್ಯ' ಎಂಬ ಮರಾಠಿ ನಿಯತಕಾಲಿಕವನ್ನು
ಪ್ರಕಟಿಸಿದರು. ಅದು ಸಾಮಾಜಿಕ ಹಿತಚಿಂತನೆ ಸಮಸ್ಯೆಗಳನ್ನು ಚರ್ಚಿಸಿತು ಮತ್ತು ಪುರುಷರು ಹಾಗೂ ಮಹಿಳೆಯರಿಗೆ
ಗರ್ಭನಿರೋಧಕಗಳನ್ನು ಬಳಸುವಂತೆ ಸಲಹೆ ನೀಡಿತು. ಇದರಿಂದಾಗಿ ಪುರುಷರು ಮಗುವಿನ ಪಾಲನೆಯ ಜವಾಬ್ದಾರಿ
ತೆಗೆದುಕೊಳ್ಳುವ ಕಾರಣ ತಿಳಿಯುವರು ಮತ್ತು ಅನಗತ್ಯ ಗರ್ಭಧಾರಣೆಯನ್ನು ತಡೆಯುತ್ತಾರೆ. ಆ ಮೂಲಕ ಪ್ರಚೋದಿತ
ಗರ್ಭಪಾತದ ಸಂಭವವನ್ನು ಕಡಿಮೆ ಮಾಡಬಹುದು. ರಘುನಾಥ್ ರವರು ತಮ್ಮ ಕಾರ್ಯದಲ್ಲಿ ಭಾಗವಹಿಸುವ ಮತ್ತು
ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಉತ್ತಮ ಬೆಂಬಲ ನೀಡುವ ಪತ್ನಿಯನ್ನು ಪಡೆಯುವಲ್ಲಿ
ಅದೃಷ್ಟಶಾಲಿಗಳಾಗಿದ್ದರು.1923ರಲ್ಲಿ ಅವರು ಲಿಂಗ ಸಮಾನತೆ ಮತ್ತು ಮಹಿಳಾಸಬಲೀಕರಣ ವಿಚಾರಗಳ ಬಗ್ಗೆ
ಮಾತನಾಡಿದರು, ಕಾರಣ ಅವು ಆ ಸಮಯದಲ್ಲಿ ಅಸ್ತಿತ್ವದಲ್ಲಿರಲಿಲ್ಲ.
ಕಾರ್ವೇಯವರು ತಮ್ಮ ಪತ್ನಿಯಲ್ಲದೆ ಡಾ. ಬಿ.ರ್. ಅಂಬೇಡ್ಕರ್, ರಾಂಗ್ಲರ್ ಪರಾ0ಜಪೆ, ರಿಯಾಸತ್ಕರ್ ಸರ್ದೇಸಾಯಿ
ಮತ್ತು ಮಾಮಾ ವಾಲೆಕರ್ ಅವರ ಬೆಂಬಲವನ್ನೂ ಪಡೆದಿದ್ದರು. ಅವರು ಜೀವನದುದ್ದಕ್ಕೂ ಪ್ರವಾಹದ ವಿರುದ್ಧ ಈಜಿದರು,
ಸಾಕಷ್ಟು ಅವಮಾನ, ತೊಂದರೆಗೂ ಒಳಗಾದರು, ಆದರೆ ತಮ್ಮ ವಿಚಾರಗಳನ್ನು ಎಂದಿಗೂ ಬಿಟ್ಟುಕೊಡಲಿಲ್ಲ.

ಮೋಹನ್ ದಾಸ್ ಕರಮ್ ಚಂದ್ ಗಾಂಧಿ


ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರು ಭಾರತೀಯ ವಕೀಲರು, ವಸಾಹತುಶಾಹಿ ವಿರೋಧಿ ರಾಷ್ಟ್ರೀಯತಾವಾದಿ
ಮತ್ತು ರಾಜಕೀಯ ನೀತಿಶಾಸ್ತ್ರಜ್ಞರಾಗಿದ್ದರು, ಅವರು ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಯಶಸ್ವಿ
ಅಭಿಯಾನವನ್ನು ಮುನ್ನಡೆಸಲು ಅಹಿಂಸಾತ್ಮಕ ಪ್ರತಿರೋಧವನ್ನು ಬಳಸಿದರು ಮತ್ತು ನಂತರ ಪ್ರಪಂಚದಾದ್ಯಂತ ನಾಗರಿಕ
ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಚಳುವಳಿಗಳನ್ನು ಪ್ರೇರೇಪಿಸಿದರು.
ಮೋಹನ್‌ದಾಸ್ ಕರಮಚಂದ್ ಗಾಂಧಿಯವರು 2ನೇ ಅಕ್ಟೋಬರ್ 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ
ಜನಿಸಿದರು. ಕರಮಚಂದ್ ಗಾಂಧಿ ಮತ್ತು ಪುತಲೀಬಾಯಿ ಅವರ ಪೋಷಕರು. ಇವರ ಸಂಗಾತಿ ಕಸ್ತೂರಬಾ ಗಾಂಧಿ.
ಅವರನ್ನು ರವೀಂದ್ರನಾಥ ಠಾಗೋರ್ ಅವರು 'ಮಹಾತ್ಮ' ಎಂದು ಕರೆದರು.
ಪುರುಷ ಮಹಿಳೆಯರಿಬ್ಬರೂ ಸಮಾನ ಸ್ಥಾನ ಹೊಂದಿದ್ದಾರೆ, ಆದರೆ ಅದು ಗುರ್ತಿಸಲ್ಪಟ್ಟಿಲ್ಲ ಮತ್ತು ಇಬ್ಬರ ಸ್ಥಾನ ಒಂದೇ
ಆಗಿಲ್ಲ. ಅವರು ಅಪ್ರತಿಮ ಜೋಡಿಯಾಗಿ ಒಬ್ಬರಿಗೊಬ್ಬರು ಪೂರಕವಾಗಿದ್ದಾರೆ ಮತ್ತು ಒಬ್ಬರು ಇನ್ನೊಬ್ಬರಿಗೆ ಸಹಾಯ
ಮಾಡುತ್ತಾರೆ. ಇದರಿಂದಾಗಿ ಒಬ್ಬರಿಲ್ಲದೆ ಇನ್ನೊಬ್ಬರ ಅಸ್ತಿತ್ವವನ್ನು ಕಲ್ಪಿಸಲಾಗದು. ಆದ್ದರಿಂದ ಈ ಸಂಗತಿಗಳಿಂದ ಅವರಿಬ್ಬರ
ಸ್ಥಿತಿಯನ್ನು ದುರ್ಬಲಗೊಳಿಸುವ ಯಾವುದೇ ಅಂಶಗಳು ಅವರಿಬ್ಬರ ಸಮಾನ ನಾಶವನ್ನು ಒಳಗೊಂಡಿರುತ್ತದೆ ಎಂಬುದನ್ನು
ಅರ್ಥಮಾಡಿಕೊಳ್ಳುವುದು ಅವಶ್ಯಕ.
ಮಹಿಳಾ ಶಿಕ್ಷಣದ ಯಾವುದೇ ಯೋಜನೆಯನ್ನು ರೂಪಿಸುವಲ್ಲಿ ಈ ಪ್ರಮುಖ ಸತ್ಯವನ್ನು ನಿರಂತರವಾಗಿ
ಮನಸ್ಸಿನಲ್ಲಿಟ್ಟುಕೊಳ್ಳಬೇಕು. ವೈವಾಹಿಕ ಜೀವನದ ಬಾಹ್ಯ ಚಟುವಟಿಕೆಗಳಲ್ಲಿ ಪುರುಷನು ಸರ್ವೋಚ್ಚನಾಗಿರುತ್ತಾನೆ. ಆದ್ದರಿಂದ
ಅವನು ಅದರ ಹೆಚ್ಚಿನ ಜ್ಞಾನವನ್ನು ಹೊಂದಿರಬೇಕಾದ ವಿಷಯ ಹೊಂದಾಣಿಕೆಯಲ್ಲಿದೆ.
ಮನೆಯ ಚಟುವಟಿಕೆಗಳು ಸಂಪೂರ್ಣವಾಗಿ ಮಹಿಳೆಯರ ಪಾಲು, ಆದ್ದರಿಂದ ಮಕ್ಕಳ ಪಾಲನೆ ಮತ್ತು ಶಿಕ್ಷಣದಲ್ಲಿ,
ಕೌಟುಂಬಿಕ ವ್ಯವಹಾರಗಳಲ್ಲಿ ಮಹಿಳೆಯರು ಹೆಚ್ಚಿನ ಜ್ಞಾನವನ್ನು ಹೊಂದಿರಬೇಕು. ಆದರೆ ಈ ಜ್ಞಾನವನ್ನು ಕಟ್ಟುನಿಟ್ಟಾಗಿ
ವಿಭಾಗಿಸಬಾರದು. ಅವಳಿಗೆ ಕೊಡುವ ಶಿಕ್ಷಣವು ಯಾವುದೇ ರೀತಿಯ ನಿಗದಿತ ವಿಷಯಕ್ಕೆ ಹೊರತಾಗಿದ್ದು, ಅವಳು
ಸಮಾಜದಲ್ಲಿ ಮೆಚ್ಚುಗೆ ಪಡೆಯುವಂತಿರಬೇಕು. ಈ ಮೂಲತತ್ವಗಳ ತಾರತಮ್ಯದ ಆಧಾರವನ್ನು ಆಧರಿಸದಿದ್ದರೆ ಪುರುಷ
ಮತ್ತು ಮಹಿಳೆಯರ ಜೀವನದ ಸಂಪೂರ್ಣ ಅಭಿವೃದ್ಧಿ ಸಾಧ್ಯವಿಲ್ಲ.
ಪುರುಷರು ಮಹಿಳೆಯರನ್ನು ಕಡೆಗಣಿಸಲು ಅಥವಾ ಅವರನ್ನು ಅನಕ್ಷರತೆಯ ಆಧಾರದ ಮೇಲೆ ಅವರಿಗೆ ಸಮಾನ
ಹಕ್ಕುಗಳನ್ನು ನಿರಾಕರಿಸಲು ಯಾವುದೇ ಸಮರ್ಥನೆ ಇಲ್ಲ. ಆದರೆ ಮಹಿಳೆಯರಿಗೆ ಈ ನೈಸರ್ಗಿಕ ಹಕ್ಕುಗಳನ್ನು ಎತ್ತಿ
ಹಿಡಿಯಲು, ಅವುಗಳನ್ನು ಸುಧಾರಿಸಲು ಮತ್ತು ಹರಡಲು ಶಿಕ್ಷಣವು ಅವಶ್ಯಕವಾಗಿದೆ.
ಮಹಿಳಾ ಶಿಕ್ಷಣ: ಗಾಂಧೀಜಿ ಮಹಿಳಾ ಶಿಕ್ಷಣದ ನಾಯಕ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ
ಸ್ಥಾನಮಾನದ ಸಮಾನತೆಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು ಎಂದು ಅವರು ಪ್ರತಿಪಾದಿಸಿದರು. ಅವರು ಪರ್ದಾ
ವ್ಯವಸ್ಥೆ ಮತ್ತು ವೈಧವ್ಯ ಪಾಲನೆಯನ್ನು ತೀವ್ರವಾಗಿ ವಿರೋಧಿಸಿದರು. ಅವರು ಮಹಿಳೆಯರನ್ನು ಸಾಮಾಜಿಕ
ಗುಲಾಮಗಿರಿಯಿಂದ ಮುಕ್ತಗೊಳಿಸಲು ಬಯಸಿದ್ದರು. ಆದ್ದರಿಂದ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಬಾಲಕಿಯರ ಸಂಖ್ಯೆ
ಗಣನೀಯವಾಗಿ ಏರಿತು. ಗಾಂಧಿಯವರು ಸಮಾಜದ ಬಹಳಷ್ಟು ಸುಧಾರಣೆಗೆ ಮಹಿಳಾ ಶಿಕ್ಷಣದ ಅಗತ್ಯವನ್ನು ಒತ್ತಿ
ಹೇಳಿದರು. ಶಿಕ್ಷಣದ ಬಗ್ಗೆ ಗಾಂಧೀಜಿಯವರ ಕಲ್ಪನೆ ಅಪೂರ್ವವಾದುದು. ವೃತ್ತಿಪರ ಶಿಕ್ಷಣದ ಅವರ ಕಲ್ಪನೆಯು
ವಿಶಿಷ್ಟವಾಗಿತ್ತು. ಇದನ್ನು ಇಂದಿನ ದಿನಗಳಲ್ಲಿ ಭಾರತ ಸರ್ಕಾರವು ಉತ್ತೇಜಿಸುತ್ತಿದೆ.

ಲಿಂಗಾಧಾರಿತ ತಾರತಮ್ಯದ ವಿರುದ್ಧ ಗಾಂಧೀಜಿ


● ಗಾಂಧೀಜಿ ಸಮಾಜದಲ್ಲಿ ಗಂಡು ಮಗುವಿಗೆ ನೀಡುವ ಪ್ರಾಶಸ್ತ್ಯ ಮತ್ತು ಹೆಣ್ಣು ಮಗುವಿನ ಬಗೆಗಿನ ತಾತ್ಸಾರವನ್ನು
ಸಂಪೂರ್ಣವಾಗಿ ವಿರೋಧಿಸಿದರು.
● ಕೆಲ ಸಮಯ ಹೆಣ್ಣು ಮಗು ಜನಿಸಲು ಬಿಡದೆ ಇರುವ ಪರಿಸ್ಥಿತಿಯನ್ನು ವಿರೋಧಿಸಿದರು. ಒಂದು ವೇಳೆ ಜನಿಸಿದರೂ
ಆಕೆಯನ್ನು ರಕ್ಷಿಸುವಲ್ಲಿ ಪೋಷಕರ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
● ಗಾಂಧೀಜಿಯವರು "ಗಂಡು ಮಗು ಜನಿಸಿದ್ದಕ್ಕೆ ವಿಜೃಂಭಣೆ ಆಚರಣೆ ಮತ್ತು ಹೆಣ್ಣು ಮಗು ಜನಿಸಿದ್ದಕ್ಕೆ ಅಸಮಾಧಾನ
ವ್ಯಕ್ತಪಡಿಸುವ ಪೋಷಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತೇನೆ" ಎಂದರು.
● ಗಂಡಾಗಲಿ ಹೆಣ್ಣಾಗಲಿ ಈ ಪ್ರಪಂಚದಲ್ಲಿ ಜೀವಿಸುವ ಮತ್ತು ಬೆಳೆಯುವ ಹಕ್ಕನ್ನು ಹೊಂದಿದ್ದಾರೆ.
● ನಾನು ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ರಾಜಿಗೂ ಒಪ್ಪುವುದಿಲ್ಲ.
● ಆಕೆ ಪುರುಷನಿಂದ ಯಾವುದೇ ದೌರ್ಜನ್ಯಕ್ಕೆ ಒಳಗಾದರೂ ಅದು ಶಿಕ್ಷಾರ್ಹ ಅಪರಾಧ.
● ಮಹಿಳೆಯನ್ನು ದುರ್ಬಲ ಲಿಂಗದವರು ಎನ್ನುವುದು ಒಂದು ಪೊಳ್ಳುವಾದ, ಈ ರೀತಿಯ ಹೇಳಿಕೆ ಪುರುಷ ಮಹಿಳೆಗೆ
ತೋರುವ ಅನ್ಯಾಯವೇ ಹೊರತು ಬೇರೇನಲ್ಲ ಎಂದಿದ್ದಾರೆ.
● ಮಹಿಳೆಗೆ ಹೆಚ್ಚಿನ ತ್ಯಾಗ ಮನೋಭಾವ, ಧೈರ್ಯ, ಆತ್ಮಶಕ್ತಿ ಇಲ್ಲದೆ ಇದ್ದಿದ್ದರೆ ಪುರುಷ ಸಮಾಜದಲ್ಲಿ ಏನನ್ನೂ
ಸಾಧಿಸುತ್ತಿರಲಿಲ್ಲ, ಏಕೆಂದರೆ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ.
● ನಾವು ನಮ್ಮ ಸಮಾಜವನ್ನು ಅಹಿಂಸಾ ಸಮಾಜವನ್ನಾಗಿ ಮಾಡಬೇಕಾದರೆ ಅದು ಮಹಿಳಾ ಸಮಾನತೆಯ
ಸಾಧನೆಯಿಂದ ಮಾತ್ರ ಎಂದಿದ್ದಾರೆ.
● ಮಹಿಳೆಯು ಸಾಮಾಜಿಕವಾಗಿ ಸಶಕ್ತಳಾಗಿದ್ದು ಯಾವುದೇ ಕಾರ್ಯದಲ್ಲಿಯೂ ಅಶಕ್ತಳಲ್ಲ ಎಂದಿದ್ದಾರೆ.

ಲಿಂಗ ಸಮಾನತೆಗಾಗಿ ಸಾಂವಿಧಾನಿಕ ಅವಕಾಶಗಳು


ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದಲ್ಲಿ ಅದರ ಮುನ್ನುಡಿ, ಮೂಲಭೂತ ಹಕ್ಕುಗಳು,
ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯ ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ
ಸಮಾನತೆಯನ್ನು ನೀಡುವುದಲ್ಲದೆ, ಮಹಿಳೆಯರ ಪರವಾಗಿ ಸಕಾರಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳಲು ರಾಜ್ಯಕ್ಕೆ
ಅಧಿಕಾರ ನೀಡುತ್ತದೆ.
ಎಲ್ಲಾ ಹಂತಗಳಲ್ಲಿ ಸಮಾನತೆಯನ್ನು ತರಲು ಭಾರತೀಯ ಸಂವಿಧಾನದಲ್ಲಿನ ನಿಬಂಧನೆಗಳ ಪಟ್ಟಿ ಹೀಗಿದೆ: 1.
ಕಾನೂನಿನ ಮುಂದೆ ಸಮಾನತೆ 2. ಧರ್ಮ, ಜನಾಂಗ, ಜಾತಿ, ಲಿಂಗ or ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು
ನಿಷೇಧಿಸುವುದು. 3. ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಅವಕಾಶದ ಸಮಾನತೆ.

ಭಾರತೀಯ ಸಂವಿಧಾನ ಮತ್ತು ಮಹಿಳಾ ಸಬಲೀಕರಣ


● ಪ್ರಸ್ತಾವನೆ :- ಭಾರತದ ಸಂವಿಧಾನದ ಮುನ್ನುಡಿಯು ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ
ಸಮಾನತೆಯ ಸ್ಥಾನಮಾನ ಮತ್ತು ಅವಕಾಶ ಹಾಗೂ ವ್ಯಕ್ತಿಗೆ ಘನತೆಯನ್ನು ನೀಡುತ್ತದೆ. ಹೀಗೆ ಇದು ಪುರುಷರು
ಮತ್ತು ಮಹಿಳೆಯರನ್ನು ಸಮಾನವಾಗಿ ಪರಿಗಣಿಸುತ್ತದೆ.
● ವಿಧಿ 14 ಮಹಿಳೆಯರಿಗೆ ಸಮಾನತೆಯ ಹಕ್ಕನ್ನು ಖಚಿತಪಡಿಸುತ್ತದೆ.

😷
● ವಿಧಿ 15(1) ನಿರ್ದಿಷ್ಟವಾಗಿ ಲಿಂಗಾಧಾರಿತ ತಾರತಮ್ಯವನ್ನು ನಿಷೇಧಿಸುತ್ತದೆ.
● ವಿಧಿ 15(3) ಮಹಿಳೆಯರ ಪರವಾಗಿ ದೃಢವಾ ದ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಕ್ಕೆ ಅಧಿಕಾರ ನೀಡುತ್ತದೆ.
● 16ನೇ ವಿಧಿ ಯಾವುದೇ ನಾಗರಿಕರಿಗೆ ಉದ್ಯೋಗ (ಅ) ನೇಮಕಾತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಮಾನತೆಯ
ಅವಕಾಶವನ್ನು ಒದಗಿಸುತ್ತದೆ.
● ವಿಧಿ 39(D) ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಒದಗಿಸುತ್ತದೆ.
● ವಿಧಿ 42 ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಸುರಕ್ಷಿತಗೊಳಿಸಲು ಮತ್ತು ಮಾತೃತ್ವ
ಪರಿಹಾರಕ್ಕಾಗಿ ರಾಜ್ಯವು ನಿಬಂಧನೆಗಳನ್ನು ಒದಗಿಸುತ್ತದೆ.

ಮೂಲಭೂತ ಕರ್ತವ್ಯಗಳು - ಮೂಲಭೂತ ಕರ್ತವ್ಯಗಳನ್ನು IV-A ಭಾಗದಲ್ಲಿ ಸಂರಕ್ಷಿಸಲಾಗಿದೆ ಮತ್ತು ಭಾರತದ ಜನರು
ಅನುಸರಿಸಬೇಕಾದ ಸಕಾರಾತ್ಮಕ ಕರ್ತವ್ಯಗಳಾಗಿವೆ.ಇದು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಕರ್ತವ್ಯವನ್ನು
ಒಳಗೊಂಡಿದೆ.
● ವಿಧಿ 51(A) ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಾಮಾನ್ಯ ಸಹೋದರತ್ವದ ಮನೋಭಾವವನ್ನು
ಉತ್ತೇಜಿಸಲು ಮತ್ತು ಮಹಿಳೆಯರ ಘನತೆಗೆ ಅವಹೇಳನಕಾರಿ ಅಭ್ಯಾಸಗಳನ್ನು ತ್ಯಜಿಸಲು ದೇಶದ ನಾಗರಿಕರನ್ನು
ನಿರೀಕ್ಷಿಸಲಾಗುತ್ತದೆ.
● ಸಮಾನ ಸಂಭಾವನೆ ಕಾಯ್ದೆ,1976 - ಮಹಿಳೆಯರು ಮತ್ತು ಪುರುಷರಿಗೆ (ಕಾರ್ಮಿಕರು) ಸಮಾನ ಸಂಭಾವನೆ
ಪಾವತಿಸಲು ಮತ್ತು ತಾರತಮ್ಯವನ್ನು ತಡೆಗಟ್ಟಲು ಉದ್ದೇಶಿಸಿದೆ.
● ವರದಕ್ಷಿಣೆ ನಿಷೇಧ ಕಾಯ್ದೆ,1961 - ವರದಕ್ಷಿಣೆ ಕೊಡುವುದನ್ನು (ಅ) ತೆಗೆದುಕೊಳ್ಳುವುದನ್ನು ನಿಷೇಧಿಸುವ ಕಾಯ್ದೆ.
ಇದು ಜಮ್ಮು-ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಇಡೀ ಭಾರತಕ್ಕೆ ಅನ್ವಯಿಸುತ್ತದೆ.
● ಮಾತೃತ್ವ ಪ್ರಯೋಜನ ಕಾಯ್ದೆ,1961 - ಮಗುವಿನ ಜನನದ ಮೊದಲು ಮತ್ತು ನಂತರದ ಕೆಲವು ಅವಧಿಗಳಲ್ಲಿ
ಕೆಲವು ಸಂಸ್ಥೆಗಳಲ್ಲಿ ಮಹಿಳೆಯರ ಉದ್ಯೋಗವನ್ನು ನಿಯಂತ್ರಿಸುವ ಮತ್ತು ಮಾತೃತ್ವ ಲಾಭ ಹಾಗೂ ಇತರ
ಸೌಲಭ್ಯಗಳನ್ನು ಒದಗಿಸುವ ಕಾಯ್ದೆ.
● ಬಾಲ್ಯವಿವಾಹ ನಿಷೇದ ಕಾಯ್ದೆ,2006 - ಬಾಲ್ಯವಿವಾಹ ತಡೆಗಟ್ಟುವುದು ಈ ಕಾಯ್ದೆಯ ಉದ್ದೇಶವಾಗಿದೆ.
● ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ ಮತ್ತು ರಕ್ಷಣೆ) ಕಾಯ್ದೆ, 2013.

You might also like