You are on page 1of 7

ಖಕನ್ನಡ ಭಾಷೆ ಉಳುವಿನಲ್ಲಿ ಸರಕಾರ ಹಾಗೂ ಪ್ರಜೆಗಳ ಪಾತ್ರ

ಭಾಷೆ: ಭಾಷೆಯು ನಮ್ಮ ಆಲೋಚನೆಗಳು, ಅನಿಸಿಕೆಗಳು ಮತ್ತು ಅನುಭವಗಳನ್ನು ಇತರರಿಗೆ ತಿಳಿಸಲು ಬಳಸಲಾಗುವ ಅತ್ಯಂತ
ಸಂಕೀರ್ಣ ಮತ್ತು ಬಹುಮುಖ ಸಂಕೇತವಾಗಿದೆ. ಮಾನವನನ್ನು ಇತರೆ ಜೀವಿಗಳಿಂದ ಪ್ರತ್ಯೇಕಗೊಳಿಸಿರುವುದು ಭಾಷೆಯೇ ಆಗಿದೆ.
ಮಾನವನನ್ನು ಭಾವನಾತ್ಮಕವಾಗಿ ಬಂಧಿಸುವ ಕೊಂಡಿಯೇ ಭಾಷೆ. ಹೀಗಾಗಿ ಭಾಷೆ ಒಂದು ಸಮಾಜದ ಗುಣ ಲಕ್ಷಣಗಳನ್ನು
ಪ್ರತಿನಿಧಿಸುವ ಅಪೂರ್ವ ಮತ್ತು ಶಕ್ತಿಶಾಲಿ ಸಾಧನ. ಪ್ರಪಂಚದಾದ್ಯಂತ ಇಂತಹ ಭಾಷೆಗಳ ಸಂಖ್ಯೆ ಆರರಿಂದ ಏಳು ಸಾವಿರದ ವರೆಗೆ
ಇವೆ ಎಂದು ಭಾಷಾ ಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ.

ಕನ್ನಡ ಭಾಷೆ:ಕನ್ನಡ ಒಂದು ಪ್ರಾದೇಶಿಕ ಭಾಷೆ. ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಮಾತಾಡುತ್ತೇವೆ . ಕನ್ನಡ ಭಾಷೆ ಜಗತ್ತಿನ
ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಎರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದದ್ದು. ಒಂದು ಕಾಲದಲ್ಲಿ ಅನೇಕ ಸಾಮ್ರಾಜ್ಯಗಳ ರಾಜ್ಯ
ಭಾಷೆಯಾಗಿ ಮೆರೆದ ನಮ್ಮ ಕನ್ನಡ ಭಾಷೆ ಕಾವೇರಿಯಿಂದ ಗೋದಾವರಿ ನದಿಯವರೆಗಿನ ಭೂಪ್ರದೇಶದಲ್ಲಿ ವ್ಯಾಪಕವಾಗಿ
ಹರಡಿಕೊಂಡಿತ್ತು. ಕನ್ನಡ ಭಾಷೆ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಸಂಸ್ಕೃತ ಭಾಷೆಯಿಂದ ಹೆಚ್ಚು
ಪ್ರಭಾವಿತವಾಗಿದೆ. ತಮಿಳು, ತೆಲುಗು, ಮಲಯಾಳಂ, ತುಳು ಮುಂತಾದ ಭಾಷೆಗಳು ಕನ್ನಡ ಭಾಷೆಯ ಸೋದರ ಭಾಷೆಗಳಾಗಿವೆ.
ಕನ್ನಡ ಭಾಷೆಗೆ ಸೀಮಿತ ಸಂಖ್ಯೆಯ ಜನರು ಮಾತ್ರವೇ ವಾರಸುದಾರರು. ಕನ್ನಡಕ್ಕೆ ಇಂಗ್ಲಿಷ್ ಭಾಷೆಗಿರುವಂತೆ ಜಾಗತಿಕ
ಮನ್ನಣೆಯಾಗಲಿ ಹಿಂದಿ ಭಾಷೆಗಿರುವಂತೆ ದೇಶೀಯ ಮನ್ನಣೆಯಾಗಲಿ ಇಲ್ಲ. ಸ್ವಾತಂತ್ರ್ಯಾನಂತರ ಕರ್ನಾಟಕ
ಏಕೀಕರಣಗೊಂಡಾಗಿನಿಂದ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸುತ್ತಿದ್ದೇವೆ . ಕನ್ನಡ ಭಾಷೆಯು
ಭಾರತೀಯ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಉಲ್ಲೇಖಿಸಲಾದ ಇಪ್ಪತ್ತೆರಡು ಭಾಷೆಗಳಲ್ಲಿ ಒಂದು . ಕನ್ನಡ ಭಾಷೆ ಭಾರತದ
ಅತ್ಯಂತ ಹೆಚ್ಚು ಜನ ಮಾತನಾಡುವ ಭಾಷೆಗಳಲ್ಲಿ ಪ್ರಮುಖವಾದುದು. ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ.

ಲಿಪಿ : ಕನ್ನಡ ಲಿಪಿಯು ಅಶೋಕನ ಕಾಲದ ದಕ್ಷಿಣ ಬ್ರಾಹ್ಮಿ ಲಿಪಿಯಿಂದ ಹುಟ್ಟಿಕೊಂಡಿತು. ಕಾಲಾನಂತರದಲ್ಲಿ ಶಾತವಾಹನರು,
ಕದಂಬರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರ ಕಾಲದಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಗಿ ಮುಂದುವರೆಯುತ್ತ ಬಂದಿದೆ.
ಪ್ರಾಚೀನ ಕನ್ನಡದ ಲಿಖಿತ ರೂಪವು ಶಾಸನಗಳಲ್ಲಿ ಕಂಡು ಬರುತ್ತದೆ. ಈ ಶಾಸನಗಳಲ್ಲಿ ಕ್ರಿ. ಶ. 450 ರಲ್ಲಿ ರಚನೆಯಾದ ಹಲ್ಮಿಡಿ
ಶಾಸನ ಏಳನೇ ಶತಮಾನದ ಬಾದಾಮಿ ಶಾಸನ, ಶ್ರವಣಬೆಳಗೊಳದ ಶಾಸನಗಳು ಪ್ರಮುಖವಾಗಿವೆ.

ಸಾಹಿತ್ಯ : ಏಳನೇ ಶತಮಾನದ ನಂತರ ಕಾವ್ಯಾತ್ಮಕ ಲಕ್ಷಣಗಳನ್ನು ಹೊಂದಿರುವ ಪದ್ಯದ ಉತ್ತಮ ಮಾದರಿಗಳು ಕಂಡು ಬರುತ್ತವೆ.
ಈ ಶಾಸನಗಳ ಭಾಷೆ ಸುವ್ಯವಸ್ಥಿತವಾಗಿ ಮತ್ತು ಪ್ರಬುದ್ಧವಾಗಿರುವಲ್ಲಿ ಸಂಸ್ಕೃತ ಭಾಷೆಯ ಪ್ರಭಾವ ಆಳವಾಗಿದೆ . ಕನ್ನಡದಲ್ಲಿ ಗದ್ಯ
ಪದ್ಯ ರಚನೆಯ ಆಧಾರಗಳಿದ್ದರೂ ಕನ್ನಡದ ಮೊದಲ ಉಪಲಬ್ದ ಗ್ರಂಥವಾದ ಕವಿರಾಜಮಾರ್ಗದ ಮೂಲಕ ಕನ್ನಡ ಕೃತಿ ರಚನೆಯ ಕೆಲಸ
ಆರಂಭವಾಯಿತು ಮತ್ತು ಕನ್ನಡ ಭಾಷೆ ಬೆಳೆಯುತ್ತಾ ಬಂದಿತು. ಮಾನವ ಜಾತಿ ತಾನೊಂದೆ ವಲಂ ಎಂದು ಹೇಳಿದ ಕನ್ನಡದ ಆದಿಕವಿ
ಪಂಪ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿದ ಬಸವಣ್ಣ , ಕುಲ ಕುಲ ಕುಲ ವೆಂದು ಬಡಿದಾಡದಿರಿ ನಿಮ್ಮ ಕುಲದ
ನೆಲೆಯನೇನಾದರು ಬಲ್ಲಿರಾ ? ಎಂದು ಹೇಳಿದ ಕನಕದಾಸರು , ಮಾನವ ಜನ್ಮ ಬಲು ದೊಡ್ಡದು ಅದನು
ಹಾಳುಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಹೇಳಿದ ಪುರಂದರದಾಸರು, ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ ನಡುವೆ ಎತ್ತಣದು ಎಂದು ಸಾರಿದ ಸರ್ವಜ್ಞ , ಏನಾದರೂ ಆಗು ಮೊದಲು ಮಾನವನಾಗು
ಎಂದು ಹೇಳಿದ ಕುವೆಂಪು ,ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಹೇಳಿದ ದ ರಾ ಬೇಂದ್ರೆಯವರಂತಹ
ಮಹತ್ವದ ಕವಿಗಳನ್ನು ಚಿಂತಕರನ್ನು ಕೊಟ್ಟ ಭಾಷೆ ಕನ್ನಡ ಭಾಷೆ

ಸಮಾಜ : ಭಾಷೆಯ ಬಹುಮುಖ್ಯ ಕೊಡುಗೆಯೆಂದರೆ ಅದು ಮಾನವ ಸಮಾಜ ಸಂಸ್ಕೃತಿಯ ಪ್ರತಿಬಿಂಬ . ಆದ್ದರಿಂದ ಭಾಷೆ ನಿರ್ದಿಷ್ಟ
ನಿಯಮಗಳನ್ನು ಒಳಗೊಂಡ ಕ್ರಿಯೆಯನ್ನಷ್ಟೇ ಅಲ್ಲದೆ ಭಾಷೆ ಪ್ರಾದೇಶಿಕ ಹಾಗೂ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕಾರ್ಯವನ್ನು
ಮಾಡುತ್ತದೆ. ಭಾಷೆ ಕೇವಲ ಸಂವಹನ ಸಾಧನವಲ್ಲ ಒಂದು ಭಾಷೆಯ ಸಾಂಸ್ಕೃತಿಕ ಗುರುತು ಮತ್ತು ಐತಿಹಾಸಿಕ ಪರಂಪರೆಯ
ಮೂರ್ತ ರೂಪವಾಗಿದೆ. ಭಾಷೆಯನ್ನು ಬಳಸುವುದು ಸಮಾಜವೇ ಆಗಿರುವುದರಿಂದ ಆ ಭಾಷೆಯ ಮುಂದುವರಿಕೆ ಅಥವಾ ಅಳಿವು ಆ
ಸಮಾಜದ ಜನರ ಕೈಯಲ್ಲೇ ಇರುತ್ತದೆ. ಒಂದು ಭಾಷೆಯನ್ನು ಆರಂಭದಲ್ಲಿ ಹುಟ್ಟು ಹಾಕುವುದು ಸಮಾಜವೇ ಅದನ್ನು ಬೆಳೆಸುವುದು
ಸಮಾಜವೇ ಮತ್ತು ತನ್ನ ಸಂಸ್ಕೃತಿಯ ಮುಂದುವರಿಕೆಯಾದ ಸಾಹಿತ್ಯವನ್ನು ರಚಿಸಿ ಭಾಷೆಯು ಉನ್ನತ ಮಟ್ಟಕ್ಕೆ ಬೆಳೆಯುವಂತೆ
ಮಾಡುವುದು ಸಮಾಜವೇ, ಅದನ್ನು ಅಳಿವಿನ ಅಂಚಿಗೆ ತಳ್ಳುವುದೂ ಸಮಾಜವೇ ಆಗಿದೆ. ಆದ್ದರಿಂದ ಭಾಷೆ ಸಾಹಿತ್ಯ ಸಮಾಜಗಳು
ಒಂದಕ್ಕೊಂದು ಪರಸ್ಪರ ಪೂರಕವಾಗಿವೆ. ನಮಗೆ ತಿಳಿದಿರುವಂತೆಯೇ ಎಷ್ಟೋ ಭಾಷೆಗಳು ಬಳಕೆಯಿಂದ ನಿಂತು ಹೋಗಿವೆ, ವ್ಯಾಪ್ತಿಯನ್ನು
ವಿಸ್ತರಿಸಿಕೊಂಡಿವೆ ಸೀಮಿತಗೊಳಿಸಿಕೊಂಡಿವೆ. ಇದಕ್ಕೆಲ್ಲ ಕಾರಣ ಆ ಸಮಾಜದ ಜನರು ಮತ್ತು ಆ ಭಾಷಾ ಪ್ರದೇಶದಲ್ಲಿ
ಅಧಿಕಾರದಲ್ಲಿರುವ ಸರ್ಕಾರಗಳ ಪಾತ್ರವೂ ಮುಖ್ಯವಾಗಿದೆ.

ಕನ್ನಡ ಭಾಷೆ ಇಂದು ಅಳಿವಿನಂಚಿನತ್ತ ಸಾಗುತ್ತಿದೆ ಅದರಲ್ಲೂ ಗಡಿ ಭಾಗದಲ್ಲಿ ಕನ್ನಡದ ಸ್ಥಿತಿ ಚಿಂತಾಜನಕವಾಗಿದೆ . ಇದಕ್ಕೆ ರಾಜಕೀಯ
ಇಚ್ಛಾಶಕ್ತಿಯ ಕೊರತೆ ಅಭಿಮಾನ ಶೂನ್ಯ ಆಡಳಿತ ವರ್ಗ ಇವೇ ಮೊದಲಾದ ಕಾರಣಗಳೂ ಹೌದು. ನಿರಭಿಮಾನಿ ಕನ್ನಡಿಗರೇ
ಹೆಚ್ಚಾಗಿರುವ ನಮ್ಮ ನಾಡಿನಲ್ಲಿ ಕನ್ನಡ- ಕನ್ನಡಿಗರು ಅತಂತ್ರರಾಗಿ ಅಲ್ಪಸಂಖ್ಯಾತರಾಗುವ ಮೊದಲು ಎಚ್ಚತ್ತುಕೊಂಡು ತಮ್ಮತನ ತಮ್ಮ
ಭಾಷೆ ಸಂಸ್ಕೃತಿಗಳ ಆತ್ಮಾವಲೋಕನ ಮಾಡಿಕೊಳ್ಳಲು ಜಾಗೃತಗೊಳ್ಳಲು ಸರಿಯಾದ ಸಮಯವಿದು. ಕನ್ನಡವನ್ನು ಕಳೆದುಕೊಂಡಾಗ
ನಮ್ಮ ಸ್ವಂತಿಕೆಯೂ ನಶಿಸಿ ಹೋಗುತ್ತದೆ. ಇದನ್ನು ಅರಿತುಕೊಳ್ಳಲು ಮಾನವನ ಅವಶ್ಯಕತೆಯನ್ನು ಪೂರೈಸುವ ಸಾಧನವಾಗಿ
ಭಾಷೆಯೊಂದು ಉದಯವಾಗಿ ಬೆಳೆದು ಪ್ರಾದೇಶಿಕತೆ ಮತ್ತು ಬಾಂಧವ್ಯವನ್ನು ಬೆಸೆಯುವ ಪ್ರಕ್ರಿಯೆಯನ್ನು ಮೊದಲು ತಿಳಿಯಬೇಕು. ಈ
ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಉಳಿವಿನಲ್ಲಿ ಸರಕಾರ ಹಾಗೂ ಪ್ರಜೆಗಳ ಪಾತ್ರವೇನೆಂಬುದನ್ನು ನೋಡಬಹುದು.

ಪ್ರಜೆಗಳ ಪಾತ್ರ

ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಶಾಸ್ತ್ರೀಯ ಭಾಷೆಯಾದ ಕನ್ನಡವು ಕರ್ನಾಟಕದ ಜನರಿಗೆ ಕೇವಲ ಸಂವಹನ
ಸಾಧನವಲ್ಲ, ಕನ್ನಡಿಗರ ಸಾಂಸ್ಕೃತಿಕ ಗುರುತು ಮತ್ತು ಐತಿಹಾಸಿಕ ಪರಂಪರೆಯ ಮೂರ್ತ ರೂಪವಾಗಿದೆ. ಇಂದಿನ ಜಾಗತೀಕರಣ
ಮತ್ತು ಪ್ರಮುಖ ಭಾಷೆಗಳ ಪ್ರಾಬಲ್ಯದ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಮತ್ತು ಬೆಳೆಸುವಲ್ಲಿ ಕನ್ನಡಿಗರ ಪಾತ್ರ
ಅತ್ಯುನ್ನತವಾಗಿದೆ. ಕನ್ನಡಿಗರು ತಮ್ಮ ಭಾಷಾ ಪರಂಪರೆಯನ್ನು ಕಾಪಾಡುವಲ್ಲಿ ಮತ್ತು ಕನ್ನಡದ ಜೀವಂತಿಕೆಗೆ ಕೊಡುಗೆ ನೀಡುವಲ್ಲಿ
ಹೆಚ್ಚಿನ ಮನಸ್ಥಿತಿಯನ್ನು ಹೊಂದಬೇಕು.

ಸಂಪ್ರದಾಯಗಳು ಜಾನಪದ ಮತ್ತು ಭಾಷಿಕ ಸೂಕ್ಷ್ಮ ವ್ಯತ್ಯಾಸಗಳನ್ನು ಪಾಲಿಸುವ ಮತ್ತು ಮುಂದಿನ ಪೀಳಿಗೆಗೆ ರವಾನಿಸುವ ಮೂಲಕ
ಕರ್ನಾಟಕದ ಅನನ್ಯ ಗುರುತಿನ ನಿರಂತರತೆಯನ್ನು ಕಾಪಾಡಬೇಕಾಗಿದೆ .

ಶ್ರೀಮಂತ ಸಾಹಿತ್ಯ ಪರಂಪರೆಯು ಕನ್ನಡ ಸಾಹಿತ್ಯದ್ದಾಗಿದೆ. ಇಲ್ಲಿನ ಪ್ರಖ್ಯಾತ ಕವಿಗಳು ಮತ್ತು ಬರಹಗಾರರು ಕನ್ನಡ ಸಾಹಿತ್ಯಕ್ಕೆ
ನೀಡಿರುವ ಕೊಡುಗೆಯನ್ನು ಸ್ಮರಿಸುವ ಮತ್ತು ಉತ್ತೇಜಿಸುವ ಕೆಲಸ ಮಾಡಬೇಕು . ಜಾಗತೀಕರಣದ ಪರಿಣಾಮವಾಗಿ ಪ್ರಾದೇಶಿಕ
ಭಾಷೆಗಳಿಗೆ ಸವಾಲುಗಳು ಸಹಜ. ಆದರೆ ಕನ್ನಡಿಗರಾದ ನಾವು ಜಾಗತಿಕ ಅವಕಾಶಗಳನ್ನು ಅಳವಡಿಸಿಕೊಳ್ಳುವ ಮತ್ತು ನಮ್ಮ ಭಾಷಾ
ಮೂಲಗಳನ್ನು ರಕ್ಷಿಸಿಕೊಳ್ಳುವ ಸಮತೋಲನವನ್ನು ಹೊಂದಿರಬೇಕು. ಕನ್ನಡ ಕಾದಂಬರಿ ಸಾಹಿತ್ಯಕ್ಕೆ ಅದರದೇ ಆದ ಓದುಗರಿದ್ದರೂ
ಕೂಡ ಇಂದಿನ ಕಂಪ್ಯೂಟರ್ ಯುಗದಲ್ಲಿ ಅದಕ್ಕೆ ಅನುಗುಣವಾದ ಪ್ರಚಾರ ಕೊಟ್ಟರೆ ಶ್ರೀಮಂತ ಸಾಹಿತ್ಯ ಲೋಕಕ್ಕೆ ಹೊಸ ಕವಿ ಲೇಖಕರ
ಪಾದಾರ್ಪಣೆಗೆ ಹಾಗೂ ಹೊಸ ಓದುಗರ ಸೃಷ್ಟಿ ಸಾಧ್ಯವಾಗುತ್ತದೆ ಭಾಷೆ, ನೆಲ, ಜಲದ ವಿಷಯದಲ್ಲಿ ದೃಶ್ಯ ಮಾಧ್ಯಮ ಹಾಗೂ
ಸಾಮಾಜಿಕ ಜಾಲತಾಣ ಕಲೆಯ ಕೊಡುಗೆ ತುಂಬಾ ಇದೆ. ಚಲನಚಿತ್ರ ಹಾಗೂ ಸಂಗೀತದಲ್ಲಿ ಹೊಸ ಪ್ರಯೋಗ ಹಾಗೂ ಗುಣಮಟ್ಟದ
ಕೊಡುಗೆ ಬಂದಾಗ ಕನ್ನಡದ ಕಂಪು ವಿಶ್ವದಲ್ಲಿ ಹಬ್ಬಲು ಸಾಧ್ಯ.

ಡಿಜಿಟಲ್ ಯುಗದಲ್ಲಿ ಕನ್ನಡಿಗರು ಡಿಜಿಟಲ್ ಜಾಗದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಆನ್ ಲೈನ್ ನಲ್ಲಿ ಕನ್ನಡ ವಿಷಯಗಳು ಹೆಚ್ಚಿನ
ರೀತಿಯಲ್ಲಿ ಸಿಗುವಂತೆ ಮಾಡಬೇಕು ಮತ್ತು ಭಾಷಾ ಪ್ರಚಾರಕ್ಕಾಗಿ ತಂತ್ರಜ್ಞಾನವನ್ನು ಬಳಸಬೇಕು. ಕನ್ನಡ ಭಾಷೆಯನ್ನು ಉಳಿಸುವಲ್ಲಿ
ಕನ್ನಡಿಗರ ಪಾತ್ರವು ಭಾಷಾ ಸಂರಕ್ಷಣೆಯ ಆಚೆಗೂ ವಿಸ್ತಾರವಾಗಬೇಕಾಗಿದೆ. ಇದರಿಂದ ಸಾಂಸ್ಕೃತಿಕ ಪರಂಪರೆ ಗುರುತು ಮತ್ತು ಏಕತೆಗೆ
ಅವರ ಬದ್ಧತೆಗೆ ಸಾಕ್ಷಿಯಾಗಬೇಕಾಗಿದೆ. ಮಾಧ್ಯಮ, ಕಲೆ ಮತ್ತು ಸಮುದಾಯದ ಅಭಿವೃದ್ಧಿಯನ್ನು ತಮ್ಮ ಪ್ರಯತ್ನಗಳನ್ನು
ಮುಂದುವರೆಸುವ ಮೂಲಕ ಕನ್ನಡಿಗರು ಕನ್ನಡ ಕೇವಲ ಒಂದು ಭಾಷೆಯಾಗಿ ಉಳಿಯದೆ ಮುಂದಿನ ಪೀಳಿಗೆಗೆ ಬೆಳೆಯುವ ಜೀವಂತ
ಪರಂಪರೆಯಾಗಿ ಉಳಿಯುವಂತೆ ಮಾಡಬೇಕು.

ಕನ್ನಡ ಚಲನಚಿತ್ರೋದ್ಯಮವು ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಬಲ ಸಾಧನವಾಗಿದೆ .ಕನ್ನಡಿಗರು ತಮ್ಮ ಬೆಂಬಲ ಮತ್ತು
ಪ್ರೋತ್ಸಾಹದ ಮೂಲಕ ಕನ್ನಡ ಸಿನಿಮಾ ಸಂಗೀತ ಮತ್ತು ಪ್ರದರ್ಶನ ಕಲೆಗಳ ಯಶಸ್ಸಿಗೆ ಶ್ರಮಿಸಬೇಕು.ಶ್ರೀಮಂತ ಸಾಹಿತ್ಯ ಲೋಕಕ್ಕೂ
ಚಲನಚಿತ್ರ ರಂಗಕ್ಕೂ ಇರುವ ಕೊಂಡಿಯನ್ನು ಬಲಗೊಳಿಸುವ ಪ್ರಯತ್ನ ಚಲನಚಿತ್ರ ರಂಗದಿಂದ ಆಗಬೇಕು.

ಪತ್ರಿಕೆಗಳು, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಕನ್ನಡ ಮಾಧ್ಯಮದ ವೇದಿಕೆಗಳೊಂದಿಗೆ ಕನ್ನಡಿಗರು ಸಕ್ರಿಯವಾಗಿ
ತೊಡಗಿಸಿಕೊಳ್ಳಬೇಕು. ಮಾತೃಭಾಷೆಯಲ್ಲಿ ಯಾವುದೇ ವಿಷಯವನ್ನು ಪಡೆಯುವುದರ ಮೂಲಕ ಕನ್ನಡ ಮಾಧ್ಯಮದ ಪೋಷಣೆ ಮತ್ತು
ಬೆಳವಣಿಗೆಗೆ ಶ್ರಮಿಸಬೇಕು.

ವ್ಯಾಪಾರ ಮತ್ತು ಉದ್ಯಮಶೀಲತೆಯಲ್ಲಿ ಕನ್ನಡಿಗರು ವಾಣಿಜ್ಯ ವಹಿವಾಟು ಮತ್ತು ಸಂವಹನದಲ್ಲಿ ಕನ್ನಡದ ಬಳಕೆಯನ್ನು
ಮಾಡುವುದರಿಂದ ದೈನಂದಿನ ಜೀವನದ ವಿವಿಧ ಅಂಶಗಳಿಗೆ ಭಾಷೆಯು ಬಳಕೆಯಾಗಿ ಉಳಿಯುತ್ತದೆ . ಕನ್ನಡದ ಹೆಣ್ಣು ಮಕ್ಕಳು ಕನ್ನಡದ
ಅಡುಗೆಗಳನ್ನು ಹೇಳಿ ಕೊಡುವ ಮೂಲಕ ಕನ್ನಡದ ಕೆಲಸ ಮಾಡಲು ಪ್ರೇರಣೆ ಕೊಡಬೇಕು. ಸೋಷಿಯಲ್ ಮೀಡಿಯಾ ಮೂಲಕ
ಕನ್ನಡಿಗರು ಎಷ್ಟು ದೊಡ್ಡ ಕಮ್ಯುನಿಟಿ ಎಂದು ಈ ಪ್ರಪಂಚಕ್ಕೆ ತೋರಿಸಬೇಕು. ಕನ್ನಡ ಮಾತನಾಡುವುದು ಸಹ ಯಶಸ್ವಿಗೆ
ಕಾರಣವಾಗುತ್ತದೆ ಎಂಬ ಅರಿವನ್ನು ಹರಡಬೇಕು.

ಇಂಗ್ಲಿಷ್ ಶ್ರೇಷ್ಠ ಎಂಬ ಭ್ರಮೆಯಿಂದ ಹೊರ ಬಂದು ಕನ್ನಡವನ್ನು ವಿಶ್ವಾಸದಿಂದ ಮಾತನಾಡಬೇಕು. ಬ್ಯಾಂಕ್ ಗಳಲ್ಲಿ, ಎಟಿಎಂ ಗಳಲ್ಲಿ ಪತ್ರ
ವ್ಯವಹಾರದಲ್ಲಿ ಕೂಡ ಕನ್ನಡ ಬಳಸಬೇಕು. ಕನ್ನಡ ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಕನ್ನಡವನ್ನು ನಮ್ಮ ಜೀವನದ ಒಂದು
ಭಾಗವಾಗಿಸಿಕೊಳ್ಳಬೇಕು . ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು. ಕನ್ನಡ ಕಲಿಕೆ ಮತ್ತು ಕನ್ನಡದ ಬಳಕೆಯಿಂದಲೂ
ಜೀವನದಲ್ಲಿ ಯಶಸ್ಸು ಕಾಣಬಹುದು ಎಂಬುದನ್ನು ತಿಳಿಯಬೇಕು. ಅನ್ಯ ಭಾಷಿಗರನ್ನು ಕನ್ನಡ ಕಲಿಯಲು ಪ್ರೋತ್ಸಾಹಿಸಬೇಕು. ಯಾರೇ
ಆಗಿರಲಿ ಕರ್ನಾಟಕಕ್ಕೆ ಬಂದವರ ಜೊತೆ ಕನ್ನಡಿಗರಾದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ನಾವೆಲ್ಲರೂ ಕನ್ನಡವನ್ನೇ ದೈನಂದಿನ
ಜೀವನದಲ್ಲಿ ಕಡ್ಡಾಯವಾಗಿ ಬಳಸಿದರೆ ಅವರಿಗೂ ಕನ್ನಡ ಕಲಿಕೆ ಅನಿವಾರ್ಯವಾಗುತ್ತದೆ .ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು
ಕಡ್ಡಾಯಗೊಳಿಸಿದಾಗ ಮಕ್ಕಳಲ್ಲಿ ಕನ್ನಡದ ಬಗ್ಗೆ ಉದಾಸೀನ ಮೂಡುವುದು ಸಹಜ. ಸಾಧ್ಯವಾದಷ್ಟು ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ
ಶಿಕ್ಷಣ ಕೊಡಿಸಲು ಮುಂದಾಗಬೇಕು. ಅದಾಗದಿದ್ದಲ್ಲಿ ಮಕ್ಕಳಿಗೆ ಕನಿಷ್ಠ ಪಕ್ಷ ಕನ್ನಡ ವಿಷಯದ ಕಲಿಕೆ ಕಡ್ಡಾಯವಾಗಿರುವಂತಹ ಶಾಲೆಗಳಿಗೆ
ಕಳುಹಿಸಬೇಕು.

ಮಾತೃಭಾಷೆಯ ಬಗ್ಗೆ ಪ್ರೀತಿ ಗೌರವ ಮೂಡಬೇಕು. ಮನೆಯಲ್ಲಿ ಕುಟುಂಬದವರೊಡನೆ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ
ನಾಡಿನಲ್ಲಿಯೂ ಇಂಗ್ಲಿಷ್ ಮಾತನಾಡುವವರು ಬುಧ್ಧಿವಂತರು ಕನ್ನಡದಲ್ಲಿ ವ್ಯವಹರಿಸುವವರು ದಡ್ಡರು ಗಮಾರರು ಎಂಬ ಭಾವನೆ ಇದೆ .
ಇದು ಮೊದಲು ದೂರವಾಗಬೇಕು ಬದಲಾಗಬೇಕು. ಇಲ್ಲಿ ಕಾರ್ಯ ನಿರ್ವಹಿಸುವ ಬಹು ರಾಷ್ಟ್ರೀಯ ಕಂಪನಿಗಳು, ಸಂಸ್ಥೆಗಳು ಸಹ
ಕನ್ನಡಕ್ಕೆ ಕನ್ನಡಿಗರಿಗೆ ಪ್ರಾಧಾನ್ಯತೆ ನೀಡುವಂತೆ ಒತ್ತಾಯಿಸಬೇಕು. ಶಾಲೆಗಳು, ಸಂಘ ಸಂಸ್ಥೆಗಳು ಕಚೇರಿಗಳಲ್ಲಷ್ಟೇ ಅಲ್ಲದೆ ಕನ್ನಡಿಗರ
ಮನೆಮನದಲ್ಲಿ ಕನ್ನಡ ನಾದ ಮೊಳಗಿದಾಗ ಕನ್ನಡ ಭಾಷೆ ಬೆಳೆಯುತ್ತದೆ.

ಭಾಷಾ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸಿದಾಗ ಕನ್ನಡದಲ್ಲೇ ಬೇಕಾದ ಮಾಹಿತಿ ತಕ್ಷಣ ದೊರೆಯುತ್ತದೆ. ಆಗ ಇಂಗ್ಲಿಷ್ ಮೇಲಿನ
ಅವಲಂಬನೆ ಸಹಜವಾಗಿ ಕಡಿಮೆಯಾಗುತ್ತದೆ. ಆಧುನಿಕ ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಅಂತರ್ಜಾಲದ ನೆರವಿನಿಂದ ಕನ್ನಡ
ಬಳಕೆಯ ವೇಗ ಮತ್ತು ವ್ಯಾಪ್ತಿ ಹೆಚ್ಚುತ್ತಿದೆ. ಇದು ಇನ್ನಷ್ಟು ಬೆಳೆಯಬೇಕು.

ಕನ್ನಡ ಭಾಷೆ ನೆಲ ಜಲ ಸಂರಕ್ಷಣೆ , ಸಂಸ್ಕೃತಿ ಉಳಿಸುವಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ಮಹತ್ತರವಾದದ್ದು. ಕನ್ನಡ ಉಳಿವಿಗೆ
ಸಂಘಟನೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ. ಸಮಾಜದಲ್ಲಿ ಕನ್ನಡಪರ ಸಂಘಟನೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಸಮಾಜದ
ಕೆಲಸ ಕೂಡ ಆಗಿದೆ. ಕನ್ನಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಮುಂತಾದ ಸಂಘಟನೆಗಳು ಭಾಷೆ ಸಂಸ್ಕೃತಿ ಪರವಾಗಿ ಹೆಚ್ಚು ಕೆಲಸ
ಮಾಡುತ್ತಿವೆ/ ಮಾಡಬೇಕು.

ಒಂದು ಭಾಷೆ ಬೆಳೆಯಬೇಕಾದರೆ ಆ ಭಾಷೆಯ, ಅದರ ಸಾಹಿತ್ಯದ ಕುರಿತಾದ ಚಿಂತನೆಗಳು ನಡೆಯಬೇಕಾದದ್ದು ಅವಶ್ಯಕ. ಕೇವಲ ನಗರ
ಕೇಂದ್ರಿತವಾಗುತ್ತಿರುವ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲಿಯೂ ಆಚರಿಸುವಂತಾಗ ಬೇಕು . ಗ್ರಾಮೀಣ ಪ್ರದೇಶದ ಸಾಹಿತಿಗಳು,
ಕಲಾವಿದರು, ಹೋರಾಟಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅವರ ಪ್ರತಿಭೆಯನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು.
ಕನ್ನಡಪರ ಸಂಘಟನೆಗಳು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ಶಾಲೆಗಳ ಸ್ಥಾಪನೆ ಮತ್ತು ಅವುಗಳ ಸೌಕರ್ಯಗಳ ಬಗ್ಗೆ
ಸರಕಾರದ ಗಮನ ಸೆಳೆಯಬೇಕು. ಗಡಿಕಾವಲು ಸಮಿತಿಗೆ ಕ್ರಿಯಾಶೀಲರನ್ನು ಆಯ್ಕೆಮಾಡಿ ನೇಮಕ ಮಾಡಬೇಕು.

ಒಟ್ಟಿನಲ್ಲಿ ಕನ್ನಡಿಗರು ಏನು ಮಾಡಬೇಕು/ ಮಾಡಬಹುದು

● ನಮ್ಮ ವ್ಯಕ್ತಿತ್ವದ ಹೆಗ್ಗುರುತಾದ ಸಹಿಯು ಕನ್ನಡದಲ್ಲಿರಲಿ

● ಎಟಿಎಂ ಯಂತ್ರಗಳಲ್ಲಿ ಕನ್ನಡ ಭಾಷೆ ಇದ್ದಾಗ ಅವಶ್ಯವಾಗಿ ಕನ್ನಡದಲ್ಲಿ ವ್ಯವಹರಿಸಿ

● ನಮ್ಮ ವಾಹನಗಳ ಸಂಖ್ಯಾ ಫಲಕಗಳಲ್ಲಿ ಕನ್ನಡ ಅಂಕಿಗಳಿಗೂ ಜಾಗವಿರಲಿ.

● ಕನ್ನಡ ಪತ್ರಿಕೆ ಕೊಂಡು ಓದಿ ಕನ್ನಡ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸಿ

● ಮದುವೆ, ಹುಟ್ಟು ಹಬ್ಬದ ಸಮಾರಂಭದಲ್ಲಿ ಕನ್ನಡ ಪುಸ್ತಕಗಳನ್ನುಉಡುಗೊರೆಯಾಗಿ ನೀಡಿ

● ಓದುವ ಸಂಸ್ಕೃತಿ ಬೆಳೆಸಿ ಕನ್ನಡ ಪುಸ್ತಕೋದ್ಯಮಕ್ಕೆ ಉತ್ತೇಜನ ನೀಡಿ

● ಎಲ್ಲೇ ಹೋದರೂ ಮೊದಲು ಕನ್ನಡ ಮಾತನಾಡಿ.

● ಕನ್ನಡೇತರರಿಗೆ ಕನ್ನಡ ಕಲಿಯುವ/ಕಲಿಸುವ ಅನಿವಾರ್ಯತೆ ಸೃಷ್ಟಿಸೋಣ

● ನಾನಿರುವ ನಗರ, ಗ್ರಾಮ, ಬೀದಿಗಳಿಗೆ ಕನ್ನಡದ ಕವಿ, ಸಾಹಿತಿ, ಕಲಾವಿದರ ಹೆಸರು ಇಡಬೇಕು.

● ನಮ್ಮ ಮಕ್ಕಳನ್ನು ಕಡ್ಡಾಯವಾಗಿ ಕನ್ನಡ ಶಾಲೆಗಳಿಗೆ ಕಳುಹಿಸೋಣ

● ನಾವು ಎಲ್ಲೇ ಇದ್ದರೂ ನಮ್ಮ ಸುತ್ತ ಮುತ್ತ ಕನ್ನಡಮಯ ವಾತಾವರಣ ಇರುವಂತೆ ನೋಡಿಕೊಳ್ಳೋಣ.

● ಕಳೆದ ಕೆಲವು ದಶಕಗಳನ್ನು ಅವಲೋಕಿಸಿದಾಗ ಕನ್ನಡದ ಬಳಕೆ ತೀವ್ರವಾಗಿ ಕುಸಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ

ನಮ್ಮ ಸಂಸ್ಕೃತಿ ನಮ್ಮತನ ಅನ್ನೋ ಭಾವನೆ ಎದೆಯಾಳದಲ್ಲಿ ಬೇರೂರಿದಾಗ ತಾಯಿಭಾಷೆ ಎಂದೆಂದಿಗೂಹೃದಯ ಸಾಮ್ರಾಜ್ಯದಲ್ಲಿ
ಅಜರಾಮರ.

ಸರ್ಕಾರದ ಪಾತ್ರ

ಭಾಷಾವಾರು ಪ್ರಾಂತಗಳ ರಚನೆಯ ಹಲವು ಉದ್ದೇಶಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಧಾನವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಆಡಳಿತ
ನಡೆಸುವುದು ಒಂದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ 1963 ಎಂಬ ಕಾಯಿದೆಯನ್ನು
ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಿತು. ಆಡಳಿತ ಭಾಷೆಯಾಗಿ
ಕನ್ನಡವನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ 1963 ರಿಂದಲೇ ತನ್ನ ನೂರಾರು ಆದೇಶಗಳು ಸುತ್ತೋಲೆಗಳು ಹಾಗೂ
ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಪ್ರಯತ್ನಶೀಲವಾಯಿತು. ರಾಜ್ಯಾಡಳಿತದಲ್ಲಿ ರಾಜ್ಯ ಭಾಷೆಗೆ ಮಾತ್ರ ಅಗ್ರಸ್ಥಾನವಿರಬೇಕು.
ಈ ಹಿನ್ನೆಲೆಯಲ್ಲಿ ಸಮಗ್ರ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನಗೊಳಿಸಲು ಅಗತ್ಯವಿರುವ ವಿವಿಧ ಕ್ರಮಗಳನ್ನು ಕೈಗೊಳ್ಳುವ
ಮೂಲಕ ರಾಜ್ಯದಲ್ಲೂ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸ್ಥಳೀಯ ಕನ್ನಡಿಗರಿಗೆ ಆದ್ಯತೆಯಲ್ಲಿ ಉದ್ಯೋಗ ದೊರಕಿಸಿ ಕೊಡುವ ಡಾ .
ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ಗಡಿ ಸಮಸ್ಯೆಗಳಿಗೆ ಪರಿಹಾರ, ಗಡಿ ಭಾಗದಲ್ಲಿ ಭಾಷಾ ಸಾಮರಸ್ಯಕ್ಕೆ ಒತ್ತು ನೀಡುವ ದಿಟ್ಟ
ನಿಲುವು ತಳೆದಿದೆ .

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಚನೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಮ್ಮ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ಶಾಸನಬದ್ಧವಾದ ಅಧಿಕಾರಗಳನ್ನು ಹೊಂದಿರುವ
ಪ್ರಾಧಿಕಾರವಾಗಿದೆ. ಕರ್ನಾಟಕದಲ್ಲಿ ಅಧಿಕೃತ ಆಡಳಿತ ಭಾಷೆಯಾಗಿ ಕನ್ನಡ ಅಳವಡಿಕೆ ಮತ್ತು ಬಳಕೆಯನ್ನು ಇದು ಪರಿಶೀಲಿಸಿ ಸೂಕ್ಷ್ಮ
ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡುತ್ತದೆ. ಕನ್ನಡ ಭಾಷೆಯ ಪ್ರೋತ್ಸಾಹ ಹಾಗೂ ಬೆಳವಣಿಗೆಯ ಕಾರ್ಯ ಚಟುವಟಿಕೆಗಳನ್ನು
ನಡೆಸುವ ಕಾರ್ಯ ವ್ಯಾಪ್ತಿ ಹೊಂದಿದೆ.

ಕನ್ನಡದ ಬೆಳವಣಿಗೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಾರ್ಯಾಗಾರ, ನ್ಯಾಯಾಂಗದಲ್ಲಿ ಕನ್ನಡ, ಕನ್ನಡ ಮಾಧ್ಯಮದ
ವಿದ್ಯಾರ್ಥಿಗಳಿಗೆ ಮಾಧ್ಯಮ ಪ್ರಶಸ್ತಿ, ಹೊರನಾಡ ಕನ್ನಡಿಗರ ಸಮಾವೇಶ, ಭಾಷಾ ಭಾವೈಕ್ಯ ಸಮಾವೇಶ, ಕವಿಗೋಷ್ಠಿ, ಕನ್ನಡ
ನುಡಿಹಬ್ಬ, ಕನ್ನಡ ಜಾಗೃತಿ ಜಾಥಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ಕನ್ನಡ ಜಾಗೃತಿ ಶೈಕ್ಷಣಿಕವಾಗಿ ಹಿಂದುಳಿದ ಹೊರ ರಾಜ್ಯಗಳಲ್ಲಿ
ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸುವುದೇ ಅಲ್ಲದೆಕನ್ನಡ ಭವನ ನಿರ್ಮಾಣ
ಮುಂತಾದ ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಿ ಕನ್ನಡವನ್ನು ಜನಸಮುದಾಯದ ಸಮೀಪಕ್ಕೆ
ತೆಗೆದುಕೊಂಡು ಹೋಗುವ ಪ್ರಾಮಾಣಿಕ ಹಾಗೂ ಬದ್ಧತೆಯ ಕೆಲಸ ಮಾಡುತ್ತ ಬಂದಿದೆ.

ಕನ್ನಡವನ್ನು ಆಡಳಿತ ಭಾಷೆಯೆಂದು ಸರ್ಕಾರ ಘೋಷಿಸಿದೆಯಾದರೂ ಅನುಷ್ಠಾನಕ್ಕೆ ತರುವಲ್ಲಿ ಬಹಳಷ್ಟು ತೊಡಕುಗಳಿದ್ದು ಈ


ತೊಡಕುಗಳನ್ನು ನಿವಾರಿಸಿ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ
ಅನುಷ್ಠಾನಗೊಳಿಸಲು ಸಾಧ್ಯವಿರುವಂತೆ ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಲ್ಲಿ ಕನ್ನಡ
ಬಳಸುವವರ ಸಂಖ್ಯೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಆಡಳಿತ
ತರಬೇತಿ ಸಂಸ್ಥೆಗಳಲ್ಲಿ ಆಡಳಿತ ಕನ್ನಡ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ರಾಜ್ಯದಲ್ಲಿ ಶಾಲಾ ಹಂತದಲ್ಲಿಯೇ ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಪ್ರೋತ್ಸಾಹಿಸಿ ಆತ್ಮವಿಶ್ವಾಸ ತುಂಬುವ ಹಿನ್ನೆಲೆಯಲ್ಲಿ ಕನ್ನಡ
ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ
ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಹೊರ ರಾಜ್ಯದ ಗಡಿ ಭಾಗದ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗೌರವ ನೀಡಲಾಗುತ್ತಿದೆ.

ಜನಸಾಮಾನ್ಯರಿಗೆ ಅರ್ಥವಾಗುವ ಕನ್ನಡ ಭಾಷೆಯಲ್ಲಿಯೇ ನ್ಯಾಯಾಲಯಗಳಲ್ಲಿ ದಿನನಿತ್ಯದ ಪತ್ರ ವ್ಯವಹಾರ ವಾದ- ಪ್ರತಿವಾದ ತೀರ್ಪು
ಹೊರಬರುವಂತೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು
ಪ್ರಾಧಿಕಾರದಿಂದ ಗೌರವಿಸುವ ಕೆಲಸ ಮಾಡಲಾಗುತ್ತಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳು

ಕನ್ನಡವು ಶ್ರೀಮಂತ ಸಾಹಿತ್ಯವನ್ನು ಹೊಂದಿದೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯದ ಪುಸ್ತಕಗಳು ತೀರಾ
ಕಡಿಮೆ. ಆರ್ಟಿಫೀಸಿಯಲ್ ಇಂಟೆಲಿಜೆನ್ಸ್ , ಕ್ವಾಂಟಮ್ ಮೆಕ್ಯಾನಿಕ್ಸ್ ಮುಂತಾದ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಹೆಚ್ಚು
ಪುಸ್ತಕಗಳನ್ನು ಸಿದ್ವಪಡಿಸಬೇಕಾಗಿದೆ.

ಕನ್ನಡದಲ್ಲೇ ಹೊಸ ಪದಗಳನ್ನು ಕಟ್ಟಬೇಕು . ಮೊಬೈಲ್, ಚಾರ್ಜರ್, ಬ್ಲೂಟೂತ್, ವೈಫೈ ಮತ್ತು ಇನ್ನೂ ಅನೇಕ ತಾಂತ್ರಿಕ ಮತ್ತು
ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪದಗಳಿಗೆ ಹೊಸ ಪದಗಳನ್ನು ರಚಿಸಬೇಕಾಗಿದೆ.
ಓದುವ ಅಭ್ಯಾಸ

ಕಾದಂಬರಿಗಳು ಪತ್ರಿಕೆಗಳು ಇತ್ಯಾದಿಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಆನ್ಲೈನ್ ನಲ್ಲಿ ಓದುವಾಗಲೂ ಕನ್ನಡ ಆವೃತ್ತಿಗೆ
ಆದ್ಯತೆ ನೀಡಬೇಕು.

ಕನ್ನಡ ಕೋಚಿಂಗ್ ಸೆಂಟರ್

ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಎರಡೂ ಕನ್ನಡ ಕಲಿಸುವ ತರಗತಿಗಳನ್ನು ನಡೆಸಬೇಕು ಮತ್ತು ಮಾತನಾಡುವ ಮತ್ತು ಲಿಖಿತ
ಕನ್ನಡವನ್ನು ರಾಜ್ಯದಲ್ಲಿ ವಾಸಿಸುವ ಕನ್ನಡಿಗರಲ್ಲದವರಿಗೆ ಕಲಿಸಬೇಕು. ಇದನ್ನು ಈಗಾಗಲೇ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ ಇದನ್ನು
ಇನ್ನಷ್ಟು ಹೆಚ್ಚಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಅನ್ಯ ಭಾಷಿಕರು ಕಾರ್ಪೋರೇಟ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರು ತಮ್ಮ
ಉದ್ಯೋಗಿಗಳಿಗೆ ಕನ್ನಡವನ್ನು ಕಲಿಸಲು ವ್ಯವಸ್ಥೆ ಮಾಡಬೇಕು. ಕೆಲವು ಕಂಪನಿಗಳಲ್ಲಿ ಈಗಾಗಲೇ ಮಾಡಲಾಗುತ್ತಿದೆ ಇದನ್ನು ಇತರ
ಕಂಪನಿಗಳು ಸಹ ಅನುಕರಿಸಬಹುದು.

ಶಾಲೆಗಳಲ್ಲಿ ಕನ್ನಡ ಕಲಿಕೆ ಮತ್ತು ಕನ್ನಡದಲ್ಲಿ ವ್ಯವಹಾರ ಎರಡನ್ನೂ ಕಡ್ಡಾಯ ಮಾಡಬೇಕು . ಕೆಲವು ಶಾಲೆಗಳಲ್ಲಿ ಕನ್ನಡ ಕಲಿಸುತ್ತಾರೆ,
ಆದರೆ ಕನ್ನಡದಲ್ಲಿ ವ್ಯವಹಾರ ಮಾಡಲು ಅನುಮತಿ ನೀಡಿಲ್ಲ ಇದನ್ನು ಬದಲಾಯಿಸಬೇಕು. ಇಂದಿನ ಸ್ಪರ್ಧಾತ್ಮಕ ನೆಲೆಯೂರಲು ಕಷ್ಟ
ಪಟ್ಟರೆ ಅದು ಹೊರಗಡೆ ಜಗತ್ತಿಗೆ ನಕಾರಾತ್ಮಕ ಸಂದೇಶ ನೀಡೋ ಸಾಧ್ಯತೆ ಇರುತ್ತದೆ. ಎಲ್ಲಕ್ಕಿಂತ ಮೊದಲು ಹಸಿವು ಜೀವನದಲ್ಲಿ
ಪ್ರಮುಖ ಪಾತ್ರ ವಹಿಸುತ್ತದೆ. ನಂತರದ ಸ್ಥಾನದಲ್ಲಿ ದೇಶಪ್ರೇಮ, ಭಾಷಾ ಪ್ರೇಮ ನಿಲ್ಲುತ್ತದೆ. ಹೀಗಿರುವಾಗ ತಮ್ಮ ಮಕ್ಕಳನ್ನು ಆಂಗ್ಲ
ಮಾಧ್ಯಮ ಶಾಲೆಗಳಿಗೆ ಸೇರಿಸುವುದರಲ್ಲಿ ಅತಿಶಯೋಕ್ತಿ ಇಲ್ಲ. ಹೀಗಿರುವಾಗ ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆ ನಮ್ಮ ಪ್ರಮುಖ
ಕೆಲಸವಾಗಬೇಕು. ಅದಕ್ಕಾಗಿ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಅಥವಾ ಮಾತುಗಾರಿಕೆಗೆ ಪ್ರಾಮುಖ್ಯತೆ
ಕೊಡಬೇಕಾಗುತ್ತದೆ. ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸವಾಲೊಡ್ಡುವ ಶಿಕ್ಷಕರ ನೇಮಕಾತಿ
ಪ್ರಮುಖವಾಗಿ ಆಗಬೇಕಿದೆ. ಸರ್ಕಾರಈ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆ ಇಡಬೇಕಾಗಿದೆ.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಯುವ ಸಮೂಹ ಕನ್ನಡದತ್ತ ತಿರುಗಿ ನೋಡುವುದು ಅನಿವಾರ್ಯ ಹಾಗೂ
ಅವಶ್ಯಕತೆಯಾಗಿದೆ. ಕನ್ನಡ ಬಳಸಲು ಯಾವುದೇ ಮುಜುಗರಕ್ಕೆ ಒಳಪಡದೆ ಪರಭಾಷಿಗರನ್ಶು ಕನ್ನಡದಲ್ಲಿ ಮಾತನಾಡಿಸಬೇಕು. ಕನ್ನಡ
ಮಾತನಾಡುವುದು ಸಹ ಜೀವನದಲ್ಲಿ ಯಶಸ್ವಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಹರಡಬೇಕು. ಪರಭಾಷೆ ನಮಗೆ ಎಷ್ಟು
ಅವಶ್ಯವೊ ಅಷ್ಟನ್ನು ಮಾತ್ರ ಬಳಸಬೇಕು. ಅದು ಅತಿಯಾಗಬಾರದು. ಕನ್ನಡದ ವ್ಯಾಪ್ತಿ ಚಿಕ್ಕದು ಎಂಬ ಕೀಳರಿಮೆಯಿಂದ ಹೊರಬಂದು
ಕರ್ನಾಟಕ ರಾಜ್ಯದ ಬಗ್ಗೆ ಗೌರವ ಹೆಚ್ಚಿಸಿಕೊಳ್ಳಬೇಕು. ಕನ್ನಡದ ಯೂಟ್ಯೂಬ್ ಚಾನೆಲ್ ನಲ್ಲಿ ಆದಷ್ಟು ಕನ್ನಡದ ಚಾನೆಲ್ ಗಳಿಗೆ
ಚಂದಾದಾರರಾಗಬೇಕು ಇದರಿಂದ ಹೆಚ್ಚಿನ ಕನ್ನಡ ಯೂಟ್ಯೂಬರ್ಸ್ ಗಳಿಗೆ ಹುರುಪು ಸಿಗುತ್ತದೆ.

ಕನ್ನಡ ಸಿನಿಮಾಗಳನ್ನೇ ನೋಡಿ, ಕನ್ನಡ ಮೂಲದ ಕಂಪನಿಗಳ ಉತ್ಪನ್ನಗಳನ್ನು ಬಳಸಿ, ಕಸ್ಟಮರ್ ಕೇರ್ ನಲ್ಲಂತು ಕನ್ನಡ ಬಿಟ್ಟು ಬೇರೆ
ಭಾಷೆ ಮಾತಾಡಬಾರದು, ಕಂಪನಿಗಳಿಗೆ ಇದು ಮನದಟ್ಟಾದರೆ ಕನ್ನಡದಲ್ಲಿ ಮಾತನಾಡುವ ವ್ಯಕ್ತಿಯನ್ನು ನೇಮಿಸಿಕೊಳ್ಳುತ್ತಾರೆ.
ರಾಜ್ಯದಪ್ರತಿ ಶಾಲೆಯಲ್ಲೂ ಕನ್ನಡ ಕಲಿಸಲೇ ಬೇಕು. ಕರ್ನಾಟಕ ರಾಜ್ಯ ಅಥವಾ ಐ ಸಿ ಎಸ್ ಇ ಅಥವಾ ಸಿ ಬಿ ಎಸ್ ಇ ಯಾವುದೇ
ಪಠ್ಯ ಪುಸ್ತಕ ಉತ್ತಮ ಗುಣಮಟ್ಟದ್ದಾಗಿರಬೇಕು. ಇದರಿಂದಾಗಿ ವಿದ್ಯಾರ್ಥಿಯು ತನ್ನ ಹತ್ತನೇ ತರಗತಿ ಮುಗಿಸುವ ವೇಳೆಗೆ ಒಳ್ಳೆಯ
ಗುಣಮಟ್ಟದ ಕನ್ನಡದಲ್ಲಿಏನನ್ನು ಬೇಕಾದರೂ ನಿರ್ವಹಿಸಲು ಸಾಧ್ಯವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳು ಹೆಚ್ಚುಹೆಚ್ಚು
ದೊರೆಯುವಂತಾಗಬೇಕು. ಕನ್ನಡದಲ್ಲೇ ಹೊಸ ಪದಗಳನ್ನು ಕಟ್ಟಬೇಕು. ನಾವು ನಿರಂತರವಾಗಿ ನಮ್ಮ ಭಾಷೆಯನ್ನು ಹೆಮ್ಮೆಯಿಂದ ಹೆಚ್ಚು
ಆತ್ಮವಿಶ್ವಾಸದದಿಂದ ಬಳಸಿದರೆ ಖಂಡಿತವಾಗಿಯೂ ಅದರ ಬಳಕೆ ಹೆಚ್ಚಾಗುತ್ತದೆ. ಪೂರ್ಣಚಂದ್ರ ತೇಜಸ್ವಿ ಅವರು “ ಯಾವುದೇ ಭಾಷೆ
ಬೆಳೆಯುವುದು ಅದರಲ್ಲಿ ಉತ್ತಮ ಸಾಹಿತ್ಯ ನಿರ್ಮಿತಿ ಸಾಧ್ಯವಾಗುವುದು ಸಮ್ಮೇಳನಗಳಿಂದ ಅಲ್ಲ ಜನ ಅದನ್ನು ಬಳಸುವುದರಿಂದ ಮಾತ್ರ
“ ಎಂದು ಹೇಳಿರುವ ಮಾತನ್ನು ಉಲ್ಲೇಖಿಸುತ್ತ ನಾವೆಲ್ಲರೂ ಕನ್ನಡ ಭಾಷೆಯನ್ನು ಬಳಸೋಣ ಉಳಿಸೋಣ ಕನ್ನಡವೇ ಸತ್ಯ ಕನ್ನಡವೇ
ನಿತ್ಯ
ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಶಕಗಳ ಕನ್ನಡಿಗರ ಹಕ್ಕೊತ್ತಾಯ ಈಡೇರಿಕೆಗಾಗಿ ಐತಿಹಾಸಿಕ
ಚಳವಳಿ ಸಂಘಟಿಸಿ ಸಾವಿರಾರು ಅನ್ಯ ಭಾಷೆಗಳ ನಾಮ ಫಲಕಗಳನ್ನು ತೆರವುಗೊಳಿಸಿತ್ತು. ಇದರ ಪರಿಣಾಮವಾಗಿ ಕರ್ನಾಟಕ
ಸರ್ಕಾರವು ಶೇಕಡ 60 ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ಕನ್ನಡ ವಿಧೇಯಕಕ್ಕೆ ಅಂಗೀಕಾರ ನೀಡಿದೆ . ಈ ವಿಧೇಯಕದ
ಪ್ರಕಾರ ಫೆಬ್ರವರಿ 28 ರೊಳಗೆ ನಾಮ ಫಲಕಗಳಲ್ಲಿ ಶೇಕಡ 60 ರಷ್ಟು ಕನ್ನಡವನ್ನು ಕಡ್ಡಾಯಗೊಳಿಸುವ ಸಂಪೂರ್ಣ ಜಾರಿಗೆ
ತರಬೇಕು. ಜೊತೆಗೆ ವಿಧೇಯಕದಲ್ಲಿ ಹೇಳಲಾದ ಎಲ್ಲಾ ಅಂಶಗಳನ್ನು ಜಾರಿಗೊಳಿಸಬೇಕು.

2024 ರ ಕರ್ನಾಟಕ ಸರ್ಕಾರದ ಬಜೆಟ್ ನಲ್ಲಿ ಎರಡು ಸಾವಿರ ಪ್ರಾಥಮಿಕ ಶಾಲೆಗಳಿಗೆ ದ್ವಿಭಾಷಾ ಮಾಧ್ಯಮ ಅಂದ್ರೆ ಕನ್ನಡ ಮತ್ತು
ಇಂಗ್ಲಿಷ್ ಮಾಧ್ಯಮ ಶಾಲೆಯಾಗಿ ಪರಿವರ್ತನೆಯನ್ನು ಮಾಡಲಾಗುವುದು ಎಂದು ಹೇಳಿದೆ. ಕನ್ನಡ ಶಾಲೆಗಳತ್ತ ವಿದ್ಯಾರ್ಥಿಗಳನ್ನು
ಆಕರ್ಷಿಸಲು ಸರ್ಕಾರದ ಇಂತಹ ಕ್ರಮಗಳು ಅವಶ್ಯಕ. ಕನ್ನಡ ಶಾಲೆಗಳ ಅಭಿವೃದ್ಧಿಗೆ ಶ್ರಮದ ಫಲವಾಗಿ ಸರ್ಕಾರಿ ಶಾಲೆಗಳಲ್ಲಿ
ಗುಣಾತ್ಮಕ ಶಿಕ್ಷಣ ಮತ್ತು ಅಗತ್ಯ ಮೂಲ ಸೌಕರ್ಯ ಒದಗಿಸಲು ಸರಕಾರ ವಿಶೇಷ ಆಸಕ್ತಿ ವಹಿಸಿ ಸರ್ಕಾರಿ ಶಾಲೆ ಮಕ್ಕಳು ಸಹ ಈ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿ ಆಗಬೇಕೆಂಬ ಆಶಯದಿಂದ ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ತರಗತಿ ವರೆಗೆ
ಶಿಕ್ಷಣವನ್ನು ಒಂದೇ ಸೂರಿನಡಿಯಲ್ಲಿ ನೀಡುವ ಉದ್ದೇಶದಿಂದ ಆಯ್ದ ಶಾಲೆಗಳನ್ನು ಸಿ.ಎಸ್. ಆರ್. ಅನುದಾನದಡಿಯಲ್ಲಿ ಕರ್ನಾಟಕ
ಪಬ್ಲಿಕ್ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳ ಒಲವು
ಹೆಚ್ಚಾಗುವ ಆ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಆಧಾರ ಗ್ರಂಥಗಳು:

1 ) ಕನ್ನಡ ಭಾಷಾ ವಿಜ್ಞಾನ - ಡಾ ಕೆ ಕೆಂಪೇಗೌಡ

2) ಭಾಷಾ ವಿಜ್ಞಾನದ ಮೂಲತತ್ವಗಳು ಡಾ. ಎಂ. ಚಿದಾನಂದ ಮೂರ್ತಿ

3) ಕನ್ನಡ ಸಾಹಿತ್ಯ ಚರಿತ್ರೆ - ರಂ ಶ್ರೀ ಮುಗಳಿ

4) ಕನ್ನಡ ಭಾಷಾಶಾಸ್ತ್ರ - ರಾ ಯ ಧಾರವಾಡಕರ

ಪತ್ರಿಕೆಗಳು

ವಿಜಯವಾಣಿ ಪ್ರಜಾವಾಣಿ

ವಿಕಿಪೀಡಿಯಾ ಮತ್ತು ಗೂಗಲ್ ಮಾಹಿತಿಗಳು

You might also like