You are on page 1of 3

ಶೈಲಪುತ್ರೀ ದೇವಿ

ಶೈಲಪುತ್ರಿಯನ್ನು ಪಾರ್ವತಿಯ ಅವತಾರ ಎನ್ನಲಾಗುತ್ತದೆ. ಪರ್ವತ ರಾಜನ ಮಗಳಾದ ಈಕೆ


ನಂದಿವಾಹನೆಯಾಗಿ ಬಲ ಹಸ್ತದಲ್ಲಿ ತ್ರಿಶೂಲವನ್ನು ಎಡಹಸ್ತದಲ್ಲಿ ಕಮಲವನ್ನೂ ಹಿಡಿದಿರುವುದನ್ನು ಕಾಣಬಹುದು.
ದೇವಿಯು ದುಷ್ಟಶಕ್ತಿಯ ಸಂಹಾರಕ್ಕಾಗಿ ಆಯುಧಪಾಣಿಯಾಗಿದ್ದು ಸಾಕ್ಷಾತ್ ಮಹಾಕಾಳಿಯೇ ಈ
ರೂಪದಲ್ಲಿದಾಳೆಂದು ಭಕ್ತರ ನಂಬಿಕೆ. ಕ್ರಾಂತಿಯ ಸಂಕೇತವಾಗಿ ಈ ದಿನವನ್ನು ಕೆಂಪು ಬಣ್ಣದ ಮೂಲಕ
ಗುರುತಿಸಲಾಗುತ್ತದೆ.

ಬ್ರಹ್ಮಚಾರಿಣೀ ದೇವಿ

ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣೀ ದಿನವೆಂದು ಹೇಳಲಾಗುತ್ತದೆ. ಬ್ರಹ್ಮಚಾರಿಣೀ


ಎಂದರೆ ಆಶ್ರಮ ಒಂದರಲ್ಲಿ ಇತರೇ ವಿದ್ಯಾರ್ಥಿಗಳೊಂದಿಗೆ ಗುರುವಿನ ಆಶ್ರಯದಲ್ಲಿ ವಾಸಿಸುವ ಒಬ್ಬ ವಿದ್ಯಾರ್ಥಿನಿ.
ಆನಂದ ಮತ್ತು ಶಾಂತ ಸ್ಥಿತಿಯಲ್ಲಿ ದೇವಿ ಬ್ರಹ್ಮಚಾರಿಣೀಯನ್ನು ಕಾಣಬಹುದು. ಮೋಕ್ಷದಾಯಿನಿಯಾದ
ಈಕೆ, ಲೌಕಿಕ ಬಂಧನಗಳಿಂದ ಮುಕ್ತಗೊಳಿಸುವವಳೆಂಬುದಾಗಿ ಭಕ್ತರು ಆರಾಧಿಸುತ್ತಾರೆ. ಶಾಂತ
ಮೂರ್ತಿಯೂ, ಅಭಿವೃದ್ಧಿಯ ಪ್ರೇರಕಳೂ ಆಗಿರುವ ದೇವಿಯು ಜಪಮಾಲೆಯನ್ನು ಹಾಗೂ
ಕಾಮಂಡಲವನ್ನೂ ತನ್ನ ಕರಗಳಲ್ಲಿ ಅಲಂಕರಿಸಿಕೊಂಡಿದ್ದಾಳೆ. ಈ ದಿನದ ಸಂಕೇತ ನೀಲಿಯ ಬಣ್ಣ.

ಚಂದ್ರಘಂಟಾ
ಪರಶಿವನನ್ನು ವಿವಾಹವಾದ ಪಾರ್ವತಿಯು ತನ್ನ ಲಲಾಟವನ್ನು ಅರ್ಧಚಂದ್ರನಿಂದ ಅಲಂಕರಿಸಿಕೊಂಡಿರುತ್ತಾಳೆ.
ಚಂದ್ರಘಂಟಾ ಎಂದರೆ ಅರ್ಧ ಚಂದ್ರಾಕೃತಿಯಲ್ಲಿರುವ ಘಂಟೆಯನ್ನು ಅಲಂಕಾರ್ಥವಾಗಿ ಧರಿಸಿರುವವಳು. ಎಂಟು
ಬುಜಗಳುಳ್ಳ ದೇವಿಯ ಕೈಗಳಲ್ಲಿ ತ್ರಿಶೂಲ, ಗಧೆ, ಬಿಲ್ಲು-ಬಾಣ, ಖಡ್ಗ, ಕಮಲ, ಘಂಟೆ ಹಾಗೂ ಕಮಂಡಲಗಳನ್ನು
ಕಾಣಬಹುದು. ಹಣೆಯ ಮೇಲೆ ಮೂರನೆಯ ಕಣ್ಣನ್ನು ಹೊಂದಿರುವ ದೇವಿಯು ಸೌಂದರ್ಯ ಮತ್ತು ಧೀರತನದ
ಪ್ರತೀಕವಾಗಿರುವಳು. ಈ ದೇವಿಯನ್ನು ಪೂಜಿಸುವ ದಿನವನ್ನು ಪೀತವರ್ಣದಿಂದ ಗುರುತಿಸಲಾಗಿದೆ. ಇದು
ನವರಾತ್ರಿಯ ಹಬ್ಬದ ಮೂರನೇ ದಿನವಾಗಿರುತ್ತದೆ.

ಕೂಷ್ಮಾಂಡಾ
ನಾಲ್ಕನೆಯ ದಿನವೇ ಕೂಷ್ಮಾಂಡಾ ದೇವಿಯು ಪೂಜಿಗೊಳ್ಳುವ ಸಂಭ್ರಮದ ದಿನ. ಇಡೀ ವಿಶ್ವದ ಸೃಷ್ಟಿ ಶಕ್ತಿಯೂ
ಆಗಿರುವ ದೇವಿಯೇ ಕೂಷ್ಮಾಂಡಾ. ಇಲ್ಲಿ “ಕೂ” ಎಂದರೆ ಸ್ವಲ್ಪ, “ಉಷ್ಮ” ಎಂದರೆ ಶಾಕ ಅಥವಾ ಶಕ್ತಿ ಹಾಗೂ
“ಅಂಡ” ಎಂದರೆ ಅಂಡಾಣು ಎಂದರ್ಥ. ಪೃಥ್ವಿಯ ಮೇಲೆ ಸಸ್ಯಕೋಟಿಯ ಚೈತನ್ಯಪೂರ್ಣವಾದ ಇರುವಿಕೆಗೆ
ಮತ್ತು ಹಸಿರಿನ ವನಸಿರಿಯ ಉಳಿಯುವಿಕೆಗೆ ಕಾರಣೀಭೂತಳಾದ ದೇವಿ. ಎಲ್ಲದರ ರಕ್ಷಣೆಗಾಗಿ ಈಕೆಯು ಎಂಟು
ತೋಳುಗಳಿಂದ ಶೋಭಿತಳಾಗಿದ್ದು ಸಿಂಹವಾಹನೆಯಾಗಿರುತ್ತಾಳೆ. ಈ ದಿನದ ಸಂಕೇತ ಹಸಿರು ಬಣ್ಣ.
ಸ್ಕಂದಮಾತಾ
ಸ್ಕಂದಮಾತೆಯಾಗಿರುವ ಈ ದೇವಿಯು ಮಾತೃಶಕ್ತಿಯ ಸ್ವರೂಪವಾಗಿದ್ದಾಳೆ. ತನ್ನ ಶಿಶುವಿಗೆ ಯಾವುದೇ
ಅಪಾಯವಾಗಲೀ, ತೊಂದರೆಯಾಗಲೀ ಆಗದಂತೆ ರಕ್ಷಿಸುವ ಕಾಳಜಿ ಈಕೆಯದು ಆದ್ದರಿಂದ, ಗರ್ಜಿಸುತ್ತಿರುವ
ಸಿಂಹದ ಮೇಲೆ ಕುಳಿತಿರುವ ದೇವಿಯು ನಾಲ್ಕು ಬಾಹುಗಳನ್ನು ಹೊಂದಿದ್ದು ತನ್ನ ಮಗುವನ್ನು ಭದ್ರವಾಗಿ
ಅಪ್ಪಿಹಿಡಿದಿರುತ್ತಾಳೆ. ದಿನದ ಸಂಕೇತವಾಗಿ ಬೂದು ಬಣ್ಣವಾಗಿದ್ದು ದೇವಿಯು ಪರಿವರ್ತನೆಯ, ಬದಲಾವಣೆಯ
ಸಂಕೇತವಾಗಿದ್ದಾಳೆ.

ಕಾತ್ಯಾಯಿನಿ
ಕಾತ್ಯಾಯನ ಋಷಿಪುತ್ರಿಯಾಗಿದ್ದೂ ಧೀರತನವನ್ನೂ ಪ್ರದರ್ಶಿಸುವ ಈ ದುರ್ಗಾವತಾರವನ್ನು ಹೊರಾಡುವ
ದೇವತೆಯೆನ್ನಲಾಗುತ್ತದೆ. ಪಾರ್ವತಿಯ ಈ ರೂಪವು ಆಕೆಯ ಉಗ್ರರೂಪಗಳಲ್ಲಿ ಒಂದಾಗಿದೆ.
ಸಿಂಹವಾಹನೆಯಾಗಿದ್ದು ನಾಲ್ಕು ಬಾಹುಗಳನ್ನು ಹೊಂದಿರುವ ಈ ಕಾತ್ಯಾಯಿನಿಯು ಕತ್ತಿ, ಕಮಲ,
ಅಭಯಮುದ್ರೆ ಹಾಗೂ ವರದಮುದ್ರೆಯೊಂದಿಗೆ ಕಾಣಬಹುದು.ಈ ದಿನದ ಸಾಂಕೇತಿಕ ಬಣ್ಣವು ಕಿತ್ತಳ ೆಯದಾಗಿದೆ.

ಕಾಳರಾತ್ರಿ

ಏಳನೆಯ ದಿನವೇ ಕಾಳರಾತ್ರಿ ಎಂಬ ದೇವಿಯನ್ನು ಪೂಜಿಸುವ ದಿನವಾಗಿದೆ. ಈ ದೇವಿ ಆದಿಶಕ್ತಿಯ


ರೌದ್ರಾವತಾರಗಳಾದ ಕಾಳಿ, ಮಹಾಕಾಳಿ, ಭದ್ರಕಾಳಿ, ಭೈರವಿ, ಮೃತ್ಯ, ರೌದ್ರಾಣಿ, ಚಾಮುಂಡಿ, ಚಂಡಿ ಮತ್ತು
ದುರ್ಗೆಯರಲ್ಲಿ ಅಗ್ರಸ್ಥಾನವನ್ನು ಹೊಂದಿದ ದೇವತೆಯಾಗಿದ್ದಾಳೆ. ಶ್ವೇತವರ್ಣದ ಜಗನ್ಮಾತೆಯು ಶುಂಭ,
ನಿಶುಂಭರೆಂಬ ದಾನವರನ್ನು ಸಂಹಾರ ಮಾಡಲು ತಾಳಿದ ರೂಪವೇ ಇದಾಗಿದೆ. ಈಕೆಯನ್ನು ಶುಭಂಕರಿ ಎಂದೂ
ಕರೆಯಲಾಗಿದೆ. ರೌದ್ರಾವತಾರವನ್ನು ತಳೆದ ಪರಿಣಾಮವಾಗಿ ಆಕೆಯ ಬಣ್ಣವು ಕಪ್ಪಾದುದರ ಕಾರಣ
ಕಾಳರಾತ್ರಿಯೆನಿಸಿಕೊಂಡಿದ್ದಾಳೆ.

ಮಹಾಗೌರಿ
ನವರಾತ್ರಿಯ ಎಂಟನೆಯ ದಿನ ಆರಾಧನೆ ಮಾಡುವ ದೇವಿಯ ಈ ರೂಪವು ಮಹಾಗೌರಿ ಎನಿಸಿದೆ. ಒಂದು
ಕೈಯಲ್ಲಿ ತ್ರಿಶೂಲ ಹಾಗೂ ಮತ್ತೊಂದು ಕೈಯಲ್ಲಿ ಡಮರುಗವನ್ನು ಹಿಡಿದಿರುವ ದೇವಿಯು ಅಭಯಮುದ್ರೆ ಹಾಗೂ
ವರದಮುದ್ರೆಯಲ್ಲಿ ಕಾಣಬಹುದು. ಸೌಮ್ಯ ಭಾವದ ಕಲ್ಯಾಣಿಯು ಎಲ್ಲರಿಗೂ ಮಂಗಳವನ್ನುಂಟು ಮಾಡುವ
ದೇವಿಯೆನಿಸಿದ್ದಾಳೆ. ಶಾಂತಿ ಮತ್ತು ಜ್ಞಾನದ ಸಂಕೇತವಾಗಿರುವ ಈ ರೂಪವು ಗುಲಾಬಿ ಬಣ್ಣದೊಂದಿಗೆ
ಗುರುತಿಸಿಕೊಂಡಿದೆ.

ಸಿದ್ಧಿಧಾತ್ರಿ
ನವರಾತ್ರಿಯ ಕಡೆಯ ದಿನವಾದ ನವಮಿಯನ್ನು ಮಹಾನವಮಿ, ಮಾರ್ನವಮಿ ಎಂಬ ಹೆಸರುಗಳಿಂದಲೂ
ಕರೆಯುತ್ತಾರೆ. ಈ ದಿನ ದೇವಿ ಸಿದ್ಧಿಧಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿ ಎಂದರೆ ಆಧ್ಯಾತ್ಮಿಕ ಶಕ್ತಿ ಹಾಗೂ ಧಾತ್ರಿ
ಎಂದರೆ ಕೊಡುವವಳು ಅಥವಾ ಕರುಣಿಸುವವಳು ಎಂದರ್ಥ. ಕಮಲ ಪುಷ್ಪದ ಮೇಲೆ ಆಸೀನಳಾಗಿರುವ ದೇವಿಯು
ನಾಲ್ಕು ಬಾಹುಗಳನ್ನು ಹೊಂದಿದ್ದು ಗಧೆ, ಸುದರ್ಶನಚಕ್ರ, ಶಂಕ ಮತ್ತು ಕಮಲಗಳಿಂದ ಅಲಂಕೃತಳಾಗಿರುವುದನ್ನು
ಕಾಣಬಹುದು. ದೇವಿಯು ಭಕ್ತರ ಎಲ್ಲ ಕೋರಿಕೆಗಳನ್ನು ಈಡೇರಿಸುವ ಅನುಗ್ರಹದಾತೆಯೆನಿಸಿದ್ದಾಳೆ.
ಸಿದ್ಧಿಧಾತ್ರಿಯನ್ನು ಸರಸ್ವತೀ ಎಂದೂ ಪೂಜಿಸುತ್ತಾರೆ.

You might also like