You are on page 1of 2

Belle Sudarshan Acharya @ ಪರಸ್ಪರ ವಾದ ವಿವಾದ ಇತ್ಯರ್ಥ

01 JUL 2022 @ 1505


#ವೇದದಲ್ಲಿ_ವಿಷ್ಣುವಿನ_ಅವತಾರಗಳು
ಕೆಲವರು ಹೇಳುವುದುಂಟು "ಅವತಾರಗಳು ಪುರಾಣಗಳ ಅಂತೆ-ಕಂಥೆಗಳು ವೇದಗಳು ಯಾವುದೇ ಅವತಾರಗಳನ್ನು ಹೇಳುವುದಿಲ್ಲ" ಎಂದು.
ವೇದವೇ ತಿಳಿಸುವಂತೆ "ಇತಿಹಾಸಪುರಾಣಃ ಪಂಚಮೋ ವೇದಾನಾಂ ವೇದಃ" ಅಂದರೆ ಇತಿಹಾಸಪುರಾಣಗಳು ಐದನೇ ವೇದವೆಂದು.
ಮೊದಲ ನಾಕುವೇದಗಳಲ್ಲಿ ಹೇಳದ ವಿಚಾರಗಳನ್ನು ಪುರಾಣಗಳಲ್ಲಿ ಮಾತ್ರ ಹೇಳಿರಲು ಸಾಧ್ಯವೇ !? ನೋಡೋಣ. ಮೊದಲನೆಯದಾಗಿ
ವಿಷ್ಣುವು ದೇವ- ಋಷಿಗಳ ರಕ್ಷಣೆಗಾಗಿ ಬೇರೆ ಬೇರೆ ರೂಪಗಳ ಧಾರಣೆಯನ್ನು ಮಾಡುವ ವಿಚಾರ ವೇದದಲ್ಲಿ ಬರುತ್ತದೆ. ಋಗ್ವೇದದ
ಏಳನೆಯಮಂಡಲದಲ್ಲಿ ಬರುವ ನೂರನೆಯ ಸೂಕ್ತದಲ್ಲಿ -
ಕಿಮಿತ್ತೇ ವಿಷ್ಣೋಃ ಪರಿಚಕ್ಷ್ಯಂ ಭೂತ್ ಯದ್ ವವಕ್ಷೇ ಶಿಪಿವಿಷ್ಟೋ ಅಸ್ಮಿ |
ಮಾ ವರ್ಪೋ ಅಸ್ಮದಪ ಗೂಹ ಏತದ್ ಯದನ್ಯರೂಪಃ ಸಮಿಥೇ ಬಬೂಥ ||
ವಿಷ್ಣುವೇ ನೀನು "ನಾನು ಶಿಪಿವಿಷ್ಟಾಖ್ಯನು" ಎಂದು ಯಾವ ನಿನ್ನ ಹೆಸರನ್ನು ಯವ ವಿಧವಾಗಿ ಪ್ರಕಟಿಸಿದೆಯೋ ಆ ನಾಮವು
ಪ್ರಖ್ಯಾತವಾಗಿರುತ್ತದೆ. ಯಾವ ಕಾರಣದಿಂದ ಬೇರೆರೂಪವನ್ನು ಧರಿಸಿದವನಾಗಿ ಯುದ್ಧದಲ್ಲಿ ನಮಗೆ ಸಹಾಯಕನಾಗಿದ್ದೆಯೋ ನೀನು ನಿಜವಾದ
ರೂಪವನ್ನು ನಮ್ಮಿಂದ ಮರೆಮಾಚಬೇಡ ಎಂದು ಸ್ತುತಿಸಲಾಗಿದೆ. ಇಲ್ಲಿ ವಿಷ್ಣುವು ತಾನಿಚ್ಛಿಸಿದಂತೆ ಬೇರೆ ರೂಪಗಳನ್ನು ಧರಿಸುವನೆಂದು
ತಿಳಿದು ಬರುತ್ತದೆ. ಆದ್ದರಿಂದ ವೇದದಲ್ಲೇ ವಿಷ್ಣುವಿನ ಅವತಾರ ಹೇಳಿದೆ ಅದು ಕೇವಲ ಪೌರಾಣಿಕ ಮಾತ್ರವಲ್ಲ ಎಂಬುದು ಸ್ಪಷ್ಟವಾಗಿ
ತಿಳಿಯುತ್ತದೆ. ಮಹಾಭಾರತದ ಶಾಂತಿಧರ್ಮಪರ್ವದಲ್ಲಿ,
ಯಾಸ್ಕೋ ಮಾಮೃಪಿರವ್ಯಗ್ರೋ ನೈಕಯಜ್ಞೇಷು ಗೀತವಾನ್ |
ಶಿಪಿವಿಷ್ಟ ಇತಿ ಹ್ಯಸ್ಮಾದ್ಗುಹ್ಯನಾಮಧರೋ ಹ್ಯಹಮ್ ||
ಸ್ತುತ್ವಾ ಮಾಂ ಶಿಪಿವಿಷ್ಟೇತಿ ಯಾಸ್ಕ ಋಷಿರುದಾರಧೀಃ |
ಮತ್ಪ್ರಸಾದಾದಧೋ ನಷ್ಟಂ ನಿರುಕ್ತಮಭಿಜಗ್ಮಿವಾನ್ ||
ಎಂಬುದಾಗಿ ಶ್ರೀಕೃಷ್ಣನು ತನ್ನ ಶಿಪಿವಿಷ್ಟ ಎಂಬ ಹೆಸರುಳ್ಳ ರೂಪವನ್ನು ಉಪಾಸನೆಯನ್ನು ಮಾಡಿ ನಿರುಕ್ತವನ್ನು ಹೇಳುವ ಸಾಮರ್ಥ್ಯವನ್ನು
ಯಾಸ್ಕರು ಪಡೆದರು ಎಂಬುದನ್ನು ತಿಳಿಸಿದ್ದಾನೆ. ಆದ್ದರಿಂದ ಶಿಪಿವಿಷ್ಟ ಎಂಬ ಹೆಸರಿನ ಭಗವಂತನ ಉಪಾಸನೆಯಿಂದ ವೇದಾರ್ಥವನ್ನು
ತಿಳಿಯುವ ಸಾಮರ್ಥ್ಯವನ್ನು ಪಡೆಯಬಹುದು ಎಂದು ತಿಳಿಯುತ್ತದೆ. ಶತಪಥಬ್ರಾಹ್ಮಣದಲ್ಲಿ,
ಸ ಯತ್ ಕೂರ್ಮೋ ನಾಮ ಏತದ್ವೈ ರೂಪಂ ಕೃತ್ವಾ ಪ್ರಜಾಪತಿಃ ಪ್ರಜಾ ಅಸೃಜತ |
ವಿಷ್ಣುವು (ವಿಷ್ಣುಃ ಪ್ರಜಾಪತಿಃ) ಕೂರ್ಮ ಎಂಬ ಹೆಸರುಳ್ಳ ರೂಪದಿಂದ ಪ್ರಜೆಗಳನ್ನು ಸೃಷ್ಟಿಸಿದನೆಂದು ಹೇಳಲ್ಪಟ್ಟಿದೆ. ಇಲ್ಲಿ ವಿಶ್ವಕ್ಕೆ
ಆಧಾರವಾದ ವಿಷ್ಣುವಿನ ಕೂರ್ಮರೂಪವನ್ನು ಹೇಳಲಾಗಿದೆ. ಇನ್ನೂ ತೈತ್ತಿರೀಯ ಸಂಹಿತೆಯಲ್ಲಿ,
ಆಪೋ ವಾ ಇದಮಗ್ರೇ ಸಲೀಲಮಾಸೀತ್ ತಸ್ಮಿನ್ ಪ್ರಜಾಪತಿಃ ವಾಯುಃ ಭೂತ್ವಾ ಚರತ್ಸ ಇಮಾಮಪಶ್ಯತ್ತಾಂ ವರಾಹೋ ಭೂತ್ವಾ
ಹರತ್ತಾಂ ವಿಶ್ವಕರ್ಮಾ ಭೂತ್ವಾ ವ್ಯಮಾರ್ಟ್ಸಾ ಪ್ರಥತ ಸಾ ಪೃಥಿವ್ಯಭವತ್ತತ್ಪೃಥಿವ್ಯೈ ಪೃಥಿವಿತ್ವಂ ತಸ್ಯಾಮಶ್ರಮ್ಯಾತ್ಪ್ರಜಾಪತಿಃ |
ಎಂಬುದಾಗಿ ನಾರಾಯಣನು ವರಾಹರೂಪದಿಂದ ಭೂಮಿಯನ್ನು ಉದ್ಧರಿಸಿದ ವಿಷಯವನ್ನು ತಿಳಿಸಿದೆ. ಋಗ್ವೇದದಲ್ಲಿ ಬಂದ ವರಾಹನ
ಸ್ತುತಿಯು ಹೀಗಿದೆ,
ದಿವೋ ವರಾಹಂ ಅರುಷಂ ಕಪರ್ದಿನಂ ತ್ವೇಷಂ ರೂಪಂ ನಮಸಾ ನಿ ಹ್ವಯಾಮಹೇ |
ಹಸ್ತೇ ಬಿಭ್ರದ್ಭೇಷಜಾ ವಾರ್ಯಾಣಿ ಶರ್ಮ ವರ್ಮ ಛದಿರಸ್ಮಭ್ಯಂ ಯಂಸತ್ ||
ಕೆದರಿದ ಕೂದಲುಳ್ಳ ಕಾಂತಿಯುಕ್ತನಾದ ವೇದೈಕಗಮ್ಯನೂ ಆದ ವರಾಹನನ್ನು ದಿವ್ಯವಾದ ಲೋಕದಿಂದ ಇಲ್ಲಿಗೆ ಆಹ್ವಾನಿಸೋಣ. ಹೀಗೆ
ಆಹ್ವಾನಿಸಲ್ಪಟ್ಟ ಓಷದಿಗಳನ್ನು ಧರಿಸಿದ ವರಾಹನು ನಮಗೆ ಸುಖವನ್ನು, ರಕ್ಷಣೆಯನ್ನು ಹಾಗೆಯೇ ವಾಸಸ್ಥಾನಗಳನ್ನು ಅನುಗ್ರಹಿಸಲಿ ಎಂದು
ಪ್ರಾರ್ಥಿಸಿದ್ದಾರೆ. ಮಹಾನಾರಾಯಣ ಉಪನಿಷತ್ತಿನಲ್ಲೂ,
ಭೂಮಿರ್ಧೇನುರ್ಧರಣೀ ಲೋಕಧಾರಿಣೀ | ಉದ್ಧೃತಾಸಿ ವರಾಹೇಣ ಕೃಷ್ಣೇನ ಶತಬಾಹುನಾ || |
ಎಂಬುದಾಗಿ ಭೂಮಿಯನ್ನು ಉದ್ಧರಿಸಿದ ವರಾಹನ ಸ್ಮರಣೆಯು ಬಂದಿದೆ. ಋಗ್ವೇದದ ಮೊದಲ ಮಂಡಲದಲ್ಲೂ,
ಅಸ್ಯೇದು ಮಾತುಃ ಸವನೇಷು ಸದ್ಯೋ ಮಹಃ ಪಿತುಂ ಪಪಿವಾಂಚಾರ್ವನ್ನಾ |
ಯುಷಾಯದ್ ವಿಷ್ಣುಃ ಸಹೀಯಾನ್ವಿಧ್ಯದ್ ವರಾಹಂ ತಿರೋ ಅದ್ರಿಮಸ್ತಾ ||
ಸಕಲಜಗತ್ತಿನ ನಿರ್ಮಾತೃವೂ ಸರ್ವಯಜ್ಞಗಳ ಭೋಕ್ತೃವೂ ಆದ ವಿಷ್ಣುವು ಶತ್ರುಗಳ ಬಲವನ್ನು ಮರ್ದಿಸಿದನು ಆಯುಧವನ್ನು ತಿರುಗಿಸುತ್ತಾ
ಶತ್ರುವನ್ನು ಎದುರಿಸಿ ಸೀಳಿದನು, ಆನಂತರದಲ್ಲಿ ವರಾಹರೂಪವನ್ನು ಸಮಾಪ್ತಿಗೊಳಿಸಿದನೆಂದು ವರ್ಣಿಸಿದ್ದಾರೆ. ಹೀಗೆ ಭಗವಂತನ
ವರಾಹರೂಪವೂ ವೇದಗಳಲ್ಲಿ ಸ್ತುತ್ಯವಾಗಿದೆ. ವಿಷ್ಣುಸೂಕ್ತದಲ್ಲಿ -
ಪ್ರತದ್ವಿಷ್ಣುಃ ಸ್ತವತೇ ವೀರ್ಯೇಣ ಮೃಗೋ ನ ಭೀಮಃ ಕುಚರೋ ಗಿರಿಷ್ಠಾಃ |
ಯಸ್ಯೋರುಷು ತ್ರಿಷು ವಿಕ್ರಮಣೇಷ್ವಧಿಕ್ಷಿಯಂತಿ ಭುವನಾನಿ ವಿಶ್ವಾ ||
ತನ್ನ ಅದ್ಭುತವಾದ ಕ್ರಿಯೆಗಳಿಂದ ಉತ್ಕೃಷ್ಟವಾಗಿ ಸ್ತುತಿಸಲ್ಪಡಿಸುವ ವಿಷ್ಣುವು ಸಿಂಹದಂತಿದ್ದು ಭಯಹುಟ್ಟಿಸುವವನಾಗಿದ್ದಾನೆ, ಶತ್ರುಹಿಂಸಕನೂ
ಸಮಸ್ತವೇದಮಂತ್ರಗಳಿಂದ ಸದಾ ಗಮ್ಯನಾಗಿರುವಂತವನ ವಿಸ್ತಾರವಾದ ಮೂರು ಪಾದಪ್ರಕ್ಷೇಪಗಳಲ್ಲಿ ಸಮಸ್ತ ಭೂತಜಾತಗಳೂ ಜಗತ್ತು
ನೆಲೆನಿಂತಿವೆ. ಹೀಗೆ ದೀರ್ಘತಮಾ ಋಷಿಗಳು ಪರಮಾತ್ಮನ ನರಸಿಂಹರೂಪವನ್ನು ಕಂಡುಕೊಂಡಿದ್ದಾರೆ. ಇಲ್ಲಿ ಗಿರಿಷ್ಠಾ ಪದಕ್ಕೆ ಗಿರಿಯಲ್ಲಿ
ಕಾಣಿಸಿಕೊಂಡವನು, ಎತ್ತರದ ಪ್ರದೇಶದಲ್ಲಿ ಇರುವವನೆಂಬ ಅರ್ಥವನ್ನು ಕೂಡಾ ಹೇಳಲಾಗಿದೆ. ಹರಿವಂಶಪುರಾಣದಲ್ಲಿ -
ವಧಂ ಸಂಕಲ್ಪಯಿತ್ವಾ ತು ಹಿರಣ್ಯಕಶಿಪೋಃ ಪ್ರಭುಃ |
ಸೋs ಚಿರೇಣೈವ ಕಾಲೇನ ಹಿಮವತ್ಪಾರ್ಶ್ವಮಾಗತಃ ||
ಹಿರಣ್ಯಕಶ್ಯಪನನ್ನು ವಧಿಸಬೇಕೆಂದು ಸಂಕಲ್ಪಿಸಿದ ಭಗವಂತನು ಹಿಮಾಲಯಪರ್ವತದಲ್ಲಿ ಕಾಣಿಸಿಕೊಂಡನೆಂದು ತಿಳಿಸಿದೆ. ಇದು ವೇದದ
ಗಿರಿಷ್ಠಾ ಎಂಬುದರ ವಿವರಣೆಯೇ ಆಗಿದೆ. ಮಹಾಭಾರತವು ದೇವತೆಗಳ ಪ್ರಾರ್ಥನೆಯ ಮೇರೆಗೆ ಭಗವಂತ ನರಸಿಂಹರೂಪವನ್ನು
ಧರಿಸಿದನೆಂದು ತಿಳಿಸಿದೆ. ಹೀಗೆ ಪ್ರಾರ್ಥಿಸಿದ ದೇವತೆಗಳಿಗೆ ಹಿಮಾಲಯದಲ್ಲಿ ಮೊದಲು ದರ್ಶನವನ್ನು ಇತ್ತನಿರಬೇಕು. ರುದ್ರಸೂಕ್ತದಲ್ಲೂ
ವರ್ಣನೆ ಹೀಗಿದೆ,
ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಭೀಮಮುಪಹತ್ನುಮುಗ್ರಮ್ |
ಮೃಳಾ ಜರಿತ್ರೇ ರುದ್ರಸ್ತವಾನೋ ಅನ್ಯಂ ತೇ ಅಸ್ಮನ್ನಿವಪಂತು ಸೇನಾಃ ||
ಶ್ರುತಿಗಮ್ಯನೂ ಹೃದಯಗುಹೆಯಲ್ಲಿರುವ ಸದಾ ತರುಣನೂ ಸಿಂಹದಂತಿರುವವನೂ ಭಯವುಂಟುಮಾಡುವ ಶತ್ರುನಾಶಕನೂ ಆದ
ಸಮರ್ಥನನ್ನು ಸ್ತುತಿಸು. ಹೀಗೆ ನಮ್ಮಿಂದ ಸ್ತುತಿಸಲ್ಪಡುವ ಹೇ ರುದ್ರನೇ ನೀನು ನಮಗೆ ಸುಖವನ್ನುಂಟು ಮಾಡು. ನಿನ್ನ ಸೇನೆಯು
ನಮ್ಮಿಂದ ಹೊರತಾದ ಬೇರೆಯಾದನ್ನು ನಾಶಮಾಡಲಿ (ಮೋಕ್ಷಲಭಿಸಲಿ) ಎಂದು ವರ್ಣಿಸಿದ್ದಾರೆ.
ಇದೇ ಮಂತ್ರ ಯಥಾವತ್ತಾಗಿ ನರಸಿಂಹ ಪೂರ್ವತಾಪಿನೀಯ ಉಪನಿಷತ್ತಿನಲ್ಲೂ ಹಾಗೆಯೇ ಸ್ವಲ್ಪ ವ್ಯತ್ಯಾಸದೊಂದಿಗೆ ನರಸಿಂಹ
ಉತ್ತರತಾಪಿನೀಯ ಉಪನಿಷತ್ತಿನಲ್ಲೂ ಬಂದಿದೆ.
ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಭೀಮಮುಪಹತ್ನುಮುಗ್ರಮ್ |
ಮೃಳಾ ಜರಿತ್ರೇ ಸಿಂಹಃ ಸ್ತವಾನೋ ಅನ್ಯಂ ತೇ ಅಸ್ಮನ್ನಿವಪಂತು ಸೇನಾಃ ||
ರುದ್ರಪದವನ್ನು ಇಲ್ಲಿ ನೇರವಾಗಿ ಸಿಂಹವೆಂದು ಸಂಬೋಧಿಸಿದ್ದಾರೆ. ಹೀಗೆ ನರಸಿಂಹರೂಪವು ವೇದದಲ್ಲಿ ಸ್ತುತಿಸಲ್ಪಟ್ಟಿದೆ.
ಋಗ್ವೇದದಲ್ಲಿ ಬರುವ ಅತೋ ದೇವಾ ಎಂಬ ವೈಷ್ಣವಸೂಕ್ತದ ಎರಡನೇ ಮಂತ್ರಕ್ಕೆ ಸಾಯಣರು,
ವಿಷ್ಣುಸ್ತ್ರಿವಿಕ್ರಮಾವತಾರಧಾರೀದಂ ಪ್ರತೀಯಮಾನಂ ಸರ್ವಂ ಜಗದುದ್ದಿಶ್ಯ ವಿಚಕ್ರಮೇ ....
ಎಂಬಲ್ಲಿ ವಾಮನನಾದ ವಿಷ್ಣುವು ತ್ರಿವಿಕ್ರಮರೂಪದಿಂದ ಮೂರುಪಾದನಿಕ್ಷೇಪಣೆಯಿಂದ ಆಕ್ರಮಣಮಾಡಿದನೆಂಬುದಾಗಿ ಅರ್ಥೈಸಿದ್ದಾರೆ. ಪ್ರಸ್ತುತಃ
ಇಲ್ಲಿ ಮಂತ್ರಗಳಿಂದ ವಾಮನಾವತಾರದ ಅವತಾರಗಳು ಹೇಳಲ್ಪಟ್ಟಿರುವುದು ನಿಜ. ಶತಪಥ ಬ್ರಾಹ್ಮಣದಲ್ಲಿ,
ದೇವಾಶ್ಚ ವಾ ಅಸುರಾಶ್ಚ ಉಭಯೇ.... ವಾಮನೋ ಹ ವಿಷ್ಣುರಾಸ | ತದ್ದೇವಾ...... ವೇದಿಂ ಚಕ್ರೇ |
ದೇವಾಸುರರ ನಡುವೆ ಹೋರಾಟನಡೆಯುತ್ತಿದ್ದಾಗ ದೇವತೆಗಳು ಸಾಕ್ಷಾದ್ ಯಜ್ಞರೂಪಿಯಾದ ವಿಷ್ಣುವನ್ನು ಪ್ರಾರ್ಥಿಸಿ ಅವನು
ವಾಮನರೂಪಿಯಾಗಿ ಬಂದು ದೇವತೆಗಳಿಗೆ ಸಹಕರಿಸಿದ ವಿಚಾರವು ವರ್ಣಿಸಲ್ಪಟ್ಟಿದೆ.
ಹೀಗೆ ಭಗವಂತನ ಹಲವಾರು ಅವತಾರಗಳು ನಮಗೆ ವೇದದಲ್ಲೇ ಸ್ಪಷ್ಟವಾಗಿ ಸಿಗುತ್ತವೆ. ಅದ್ದರಿಂದ ಭಗವಂತನ ಅವತಾರಗಳ ವರ್ಣನೆ
ಕೇವಲ ಪುರಾಣಗಳಲ್ಲಿ ಮಾತ್ರ ಇರುವುದಲ್ಲ‌ ವೇದವು ಉಲ್ಲೇಖಿಸಿದೆ‌.
ಪಂಚಮವೇದವೆನಿಸಿದ ಪುರಾಣಗಳು ಇನ್ನೂ ವಿಸ್ತಾರವಾಗಿ ಭಗವಂತನ ಲೀಲೆಗಳನ್ನು ವರ್ಣಿಸಿದೆ.
ಶ್ರೀನಾರಾಯಣಪ್ರೀಯತಾಮ್

You might also like