You are on page 1of 2

ಒಮ್ಮೆ ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನು ಏರ್ಪಡಿಸಿದ್ದ ಹನ್ನೆರಡು ವರ್ಷಗಳ ಸತ್ರದಲ್ಲಿ ವಿಶ್ರಾಂತಿಪಡೆಯುತ್ತಿದ್ದ ಬ್ರಹ್ಮರ್ಷಿಗಳ

ಮಧ್ಯೆ ಲೋಮಹರ್ಷಣನ ಮಗ ಸೂತ ಪೌರಾಣಿಕ ಉಗ್ರಶ್ರವನು ವಿನಯಾವನತನಾಗಿ ಆಗಮಿಸಿದನು. ಅವನು ಆಶ್ರಮವನ್ನು


ತಲುಪಿದೊಡನೆಯೇ ನೈಮಿಷಾರಣ್ಯವಾಸಿ ತಪಸ್ವಿಗಳೆಲ್ಲರೂ ರೋಮಾಂಚಕ ಕಥೆಗಳನ್ನು ಕೇಳಲು ಅವನನ್ನು ಸುತ್ತುವರೆದರು.
ಪರಸ್ಪರರನ್ನು ಅಭಿವಂದಿಸಿ, ಎಲ್ಲರೂ ಕುಳಿತುಕೊಂಡ ನಂತರ ಋಷಿಗಳಲ್ಲಿಯೇ ಒಬ್ಬನು ಕಥೆಗಳನ್ನು ಪ್ರಸ್ತಾವಿಸುತ್ತಾ “ಸೌತಿ! ನೀನು
ಎಲ್ಲಿಂದ ಬರುತ್ತಿರುವೆ?” ಎಂದು ಪ್ರಶ್ನಿಸಿದನು. ಅವನಿಗೆ ಉತ್ತರಿಸುತ್ತ ಸೂತನು ಹೇಳಿದನು: “ನಾನು ರಾಜಾ ಪರೀಕ್ಷಿತನ ಮಗ
ಮಹಾತ್ಮ ರಾಜರ್ಷಿ ಜನಮೇಜಯನ ಸರ್ಪಯಾಗದಲ್ಲಿ ವ್ಯಾಸ ಕೃಷ್ಣದ್ವೈಪಾಯನನು ರಚಿಸಿದ ವಿವಿಧ ಕಥೆಗಳನ್ನೂ
ವಿಚಿತ್ರಾರ್ಥಗಳನ್ನೂ ಕೂಡಿದ ಪುಣ್ಯಕಾರಕ ಮಹಾಭಾರತ ಕಥೆಯನ್ನು ವೈಶಂಪಾಯನನು ವಿಧಿವತ್ತಾಗಿ ಹೇಳಿದುದನ್ನು ಕೇಳಿದೆ.
ನಂತರ ಹಲವಾರು ತೀರ್ಥಕ್ಷೇತ್ರಗಳನ್ನು ಸುತ್ತಾಡಿ, ಹಿಂದೆ ಕುರು-ಪಾಂಡವರು ಮತ್ತು ಸರ್ವ ರಾಜರು ಯುದ್ಧಮಾಡಿದ
ಸಮಂತಪಂಚಕ ಎಂಬ ಹೆಸರಿನ ಪುಣ್ಯ ಪ್ರದೇಶಕ್ಕೆ ಹೋದೆ. ಅಲ್ಲಿಂದ ನಾನು ಈ ಯಜ್ಞದಲ್ಲಿ ಭಾಗವಹಿಸಿರುವ ನಿಮ್ಮೆಲ್ಲರನ್ನೂ
ಕಾಣಲು ಬಂದೆ. ದ್ವಿಜರೇ! ಸ್ನಾನ-ಜಪ-ಅಗ್ನಿಹೋತ್ರಗಳನ್ನು ಮುಗಿಸಿ ಕುಳಿತಿರುವ ನಿಮಗೆ ನಾನು ಏನು ಹೇಳಲಿ?
ಧರ್ಮಸಂಗತಿಗಳನ್ನೊಡಗೂಡಿದ ಪುರಾಣ ಕಥೆಗಳನ್ನು ಹೇಳಲೇ? ಅಥವಾ ಮಹಾತ್ಮ ಋಷಿ-ನರೇಂದ್ರರ ವೃತ್ತಾಂತಗಳನ್ನು
ಹೇಳಲೇ?” ಋಷಿಗಳು ಮಹಾಭಾರತ ಇತಿಹಾಸವನ್ನು ಕೇಳಲು ಬಯಸುತ್ತೇವೆ ಎನ್ನಲು ಸೂತನು ಮಹಾಭಾರತ ಕಥೆಯನ್ನು
ಪ್ರಾರಂಭಿಸಿದನು.ಸೂತನು ಹೇಳಿದನು: “ಆದ್ಯ, ಪುರುಷ, ಈಶ, ಪುರುಹೂತ, ಪುರುಷ್ಠುತ, ಋತ, ಏಕಾಕ್ಷರ, ಬ್ರಹ್ಮ, ವ್ಯಕ್ತಾವ್ಯಕ್ತ
ಸನಾತನ, ಅಸಚ್ಚ ಸಚ್ಚ, ವಿಶ್ವ, ಸದಸತ, ಪರಮ, ಪರಾವರಗಳ ಸೃಷ್ಟ, ಪುರಾಣ, ಪರಮ, ಅವ್ಯಯ, ವರೇಣ್ಯ, ಅನಘ, ಶುಚಿ
ಮಂಗಲಗಳಲ್ಲಿ ಮಂಗಲಕರ, ವಿಷ್ಣು, ಚರಾಚರಗಳ ಗುರು, ಹರಿ ಹೃಷೀಕೇಶನಿಗೆ ನಮಸ್ಕರಿಸಿ ಮಹರ್ಷಿ ವ್ಯಾಸನ ಅತಿ ಶ್ರೇಷ್ಠ
ಕೃತಿಯೆಂದಿನಿಸಿಕೊಂಡಿರುವ ಮಹಾಭಾರತ ಕಥೆಯನ್ನು ಹೇಳಲು ಪ್ರಾರಂಭಿಸುತ್ತೇನೆ. ಋಷಿ ಪರಾಶರ ಮತ್ತು ಸತ್ಯವತಿ ಯರ ಮಗ
ಕೃಷ್ಣದ್ವೈಪಾಯನನು ತಾಯಿ ಮತ್ತು ಗಂಗೆ ಯ ಮಗ ಧರ್ಮಾತ್ಮ ಭೀಷ್ಮ ನ ಸೂಚನೆಯಂತೆ ವಿಚಿತ್ರವೀರ್ಯ ನ ಪತ್ನಿಯರಲ್ಲಿ
ಧೃತರಾಷ್ಟ್ರ, ಪಾಂಡು ಮತ್ತು ವಿದುರ ರೆಂಬ ಮೂವರು ಪುತ್ರರಿಗೆ ಜನ್ಮವಿತ್ತು ತಪಸ್ಸಿಗೋಸ್ಕರ ತನ್ನ ಆಶ್ರಮಕ್ಕೆ ತೆರಳಿದನು. ತನ್ನ
ಮಕ್ಕಳು ವೃದ್ಧರಾಗಿ ಪರಮಗತಿಯನ್ನು ಹೊಂದಿದ ಬಳಿಕ ಆ ಮಹಾನೃಷಿಯು ಭಾರತವನ್ನು ತನ್ನ ಮನಸ್ಸಿನ ಅಂತರಾಳದಲ್ಲಿಯೇ
ರಚಿಸಿ ಶಿಷ್ಯರಿಗೆ ಇದನ್ನು ಹೇಗೆ ಕಲಿಸಲಿ ಎಂದು ಚಿಂತಿಸಿದನು. ಅವನ ಆ ಚಿಂತನೆಯನ್ನು ಮನಗಂಡ ಲೋಕಗುರು ಸ್ವಯಂ
ಭಗವಾನ್ ಬ್ರಹ್ಮ ನು ಲೋಕ ಕಲ್ಯಾಣಾರ್ಥವಾಗಿ ಅವನ ಆಸೆಯನ್ನು ಈಡೇರಿಸಲು ಅಲ್ಲಿಗೆ ಆಗಮಿಸಿದನು. ಅವನನ್ನು ನೋಡಿ
ವಿಸ್ಮಿತನಾದ ದ್ವೈಪಾಯನನು ಕೈಜೋಡಿಸಿ ನಮಸ್ಕರಿಸಿ, ಉತ್ತಮ ಆಸನವನ್ನು ನೀಡಿ, ಪ್ರದಕ್ಷಿಣೆಮಾಡಿ, ಅವನ ಬಳಿ
ನಿಂತುಕೊಂಡನು. ಪ್ರೀತಿಯ ಮಂದಹಾಸವನ್ನು ಬೀರುತ್ತಿದ್ದ ಬ್ರಹ್ಮನಿಂದ ಅನುಜ್ಞೆಪಡೆದ ಅವನೂ ಕೂಡ ಆಸನದಲ್ಲಿ ಕುಳಿತುಕೊಂಡು
ಹೇಳಿದನು: “ಭಗವನ್! ನಾನು ಪರಮಪೂಜಿತ ಕಾವ್ಯವೊಂದನ್ನು ರಚಿಸಿದ್ದೇನೆ. ಇದರಲ್ಲಿ ವೇದಗಳ, ವೇದಾಂಗಗಳಾದ
ಉಪನಿಷತ್ತುಗಳ ಮತ್ತು ಇತರ ರಹಸ್ಯಗಳನ್ನು ವಿಸ್ತಾರವಾಗಿ ಅಳವಡಿಸಿದ್ದೇನೆ. ಇತಿಹಾಸ-ಪುರಾಣಗಳೂ ಸೇರಿರುವ ಇದರಲ್ಲಿ ಭೂತ,
ವರ್ತಮಾನ ಮತ್ತು ಭವಿಷ್ಯ ಈ ಮೂರೂ ಕಾಲಗಳ ಮಿಶ್ರಣವಿದೆ. ಇದರಲ್ಲಿ ವೃದ್ಧಾಪ್ಯ, ಮೃತ್ಯು, ಭಯ, ವ್ಯಾದಿಗಳ ಭಾವಾಭಾವ
ನಿಶ್ಚಯವಿದೆ ಮತ್ತು ವಿವಿಧ ಕಾಲ-ಧರ್ಮ-ಆಶ್ರಮಗಳ ಲಕ್ಷಣಗಳೂ ಇವೆ. ಇದರಲ್ಲಿ ನ್ಯಾಯ, ಶಿಕ್ಷೆ, ಚಿಕಿತ್ಸೆ, ದಾನಗಳ ವಿವರಗಳು,
ಪಶುಪತಿ, ದೇವತೆಗಳು ಮತ್ತು ಮನುಷ್ಯರ ಜನ್ಮಕಾರಣಗಳೂ ಇವೆ. ಪುಣ್ಯತೀರ್ಥ ಪ್ರದೇಶಗಳ, ನದಿ-ಪರ್ವತ-ವನ-ಸಾಗರಗಳ
ಕೀರ್ತನೆಯೂ ಇದರಲ್ಲಿದೆ. ದಿವ್ಯಪುರಗಳ ನಿರ್ಮಾಣ-ರಚನೆ, ಯುದ್ಧ ಕೌಶಲ, ಲೋಕಯಾತ್ರೆಗೆ ಅನುಕೂಲವಾಗುವಂಥವುಗಳು ಮತ್ತು
ಹೀಗೆ ಸರ್ವವಸ್ತುಗಳ ಪ್ರತಿಪಾದನೆಯನ್ನೂ ಇದರಲ್ಲಿ ಮಾಡಿದ್ದೇನೆ. ಆದರೆ ಭುವಿಯಲ್ಲಿ ಇದನ್ನು ಬರೆಯುವವರು ಯಾರು ಎನ್ನುವುದು
ತಿಳಿಯದಾಗಿದೆ!”
ನಂತರ ಸತ್ಯವತೀ ಸುತ ವ್ಯಾಸನು ಗಣಪತಿ ಹೇರಂಬನ್ನು ಸ್ಮರಿಸಿದನು. ಸ್ಮರಣಮಾತ್ರದಲ್ಲಿ ಭಕ್ತರು ಎಣಿಸಿದುದನ್ನು ಪೂರೈಸುವ
ವಿಘ್ನೇಶ ಗಣೇಶನು ಅಲ್ಲಿಗೆ ಆಗಮಿಸಿದನು. ಅವನನ್ನು ಕುಳ್ಳಿರಿಸಿ ಪೂಜಿಸಿದ ನಂತರ ವ್ಯಾಸನು ಅವನಿಗೆ “ಗಣನಾಯಕ! ನನ್ನ
ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡು ಹೇಳುವ ಈ ಭಾರತದ ಲೇಖಕನಾಗು!” ಎಂದು ಕೇಳಿಕೊಂಡನು. ಅದಕ್ಕೆ ವಿಘ್ನೇಶನು ಹೇಳಿದನು:
“ಬರೆಯುವಾಗ ಒಂದು ಕ್ಷಣವೂ ವಿರಾಮವಿಲ್ಲದಂತಾದರೆ ಮಾತ್ರ ನಾನು ಇದರ ಲೇಖಕನಾಗಬಲ್ಲೆ!”. ಅದಕ್ಕೆ ವ್ಯಾಸನು
“ಅರ್ಥಮಾಡಿಕೊಳ್ಳದೇ ಏನನ್ನೂ ಬರೆಯಬಾರದು!” ಎಂದು ಉತ್ತರಿಸಲು, ಗಣೇಶನು ಓಂಕಾರದೊಂದಿಗೆ ಭಾರತದ
ಲೇಖಕನಾದನು. ಆಗ ಮುನಿಯು ಕುತೂಹಲದಿಂದ ಶ್ಲೋಕಗಳ ಗಂಟು-ಗಂಟು ಹಾಕಿ ನಿಗೂಢಗಳನ್ನು ರಚಿಸಿದನು. ಸರ್ವಜ್ಞ
ಗಣೇಶನೂ ಕೂಡ ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಿದ್ದನು. ಆ ಸಮಯದಲ್ಲಿ ವ್ಯಾಸನು ಇತರ
ಅನೇಕ ಶ್ಲೋಕಗಳನ್ನು ರಚಿಸುತ್ತಿದ್ದನು. ಅಂಥಹ ಸುಮಾರು ೮,೮೦೦ ಶ್ಲೋಕಕೂಟಗಳ ಗುಟ್ಟು ಇದೂವರೆಗೆ ಸುದೃಢವಾಗಿಯೇ ಇದ್ದು
ಅವುಗಳ ಗೂಢಾರ್ಥಗಳನ್ನು ಭೇದಿಸಲು ಯಾರಿಗೂ ಸಾಧ್ಯವಿಲ್ಲವಾಗಿದೆ.

ಪಾಂಡವರು ಅಲ್ಲಿ ಯಾರಿಂದಲೂ ಕಡೆಗಣಿಸಲ್ಪಡದೇ, ಎಲ್ಲರಿಂದ ಪೂಜಿತರಾಗಿ ವಾಸಿಸುತ್ತಿದ್ದು ಅಖಿಲ ವೇದ ಮತ್ತು ವಿವಿಧ ಶಾಸ್ತ್ರಗಳ
ಅಧ್ಯಯನ ಮಾಡಿದರು. ಯುಧಿಷ್ಠಿರನ ಪವಿತ್ರತೆ, ಭೀಮಸೇನನ ಧೈರ್ಯ, ಅರ್ಜುನನ ವಿಕ್ರಮ, ಕುಂತಿಯ ಶುಶ್ರೂಷೆ, ಅವಳಿ ಮಕ್ಕಳ
ವಿನಯ ಮತ್ತು ಇವೆಲ್ಲವುಗಳನ್ನೂ ಮೀರಿದ ಅವರ ಶೌರ್ಯಗುಣಗಳಿಂದ ಎಲ್ಲ ಜನರೂ ಸಂತುಷ್ಟರಾದರು. ಸಮಯಾನಂತರದಲ್ಲಿ
ಅರ್ಜುನನು ಸ್ವಯಂವರದಲ್ಲಿ ದುಷ್ಕರ ಕಾರ್ಯವೊಂದನ್ನೆಸಗಿ ರಾಜಕನ್ಯೆ ದ್ರುಪದನ ಮಗಳು ಕೃಷ್ಣೆಯನ್ನು ಪತ್ನಿಯನ್ನಾಗಿ ಪಡೆದನು.
ಅಂದಿನಿಂದ ಅವನು ಸರ್ವಲೋಕದ ಧನುಷ್ಮಂತರಲ್ಲಿ ಪೂಜನೀಯ ಮತ್ತು ಸಮರದಲ್ಲಿ ಕಣ್ಣುಕುಕ್ಕುವ ಸೂರ್ಯನಂತೆ ನೋಡಲಸಾಧ್ಯ
ಎನ್ನಿಸಿಕೊಂಡನು. ಅವನು ಎಲ್ಲ ರಾಜರನ್ನೂ ಅವರೆಲ್ಲರ ಮಹತ್ತರ ಸೈನ್ಯಗಳನ್ನೂ ಗೆದ್ದು ಯುಧಿಷ್ಠಿರನ ರಾಜಸೂಯ ಮಹಾಯಜ್ಞಕ್ಕೆ
ಸಹಾಯಮಾಡಿದನು. ವಾಸುದೇವ ಕೃಷ್ಣನ ಸುನೀತಿ ಮತ್ತು ಭೀಮಾರ್ಜುನರ ಬಲದಿಂದ ಬಲಗರ್ವಿತ ಜರಾಸಂಧ ಮತ್ತು
ಶಿಶುಪಾಲರನ್ನು ಸಂಹರಿಸಿ ಯುಧಿಷ್ಠಿರನು ಎಲ್ಲ ಉತ್ತಮ ಗುಣಗಳಿಂದಲೂ ಕೂಡಿದ ಬಹು ವಿಜೃಂಭಿತ ರಾಜಸೂಯ ಯಾಗವನ್ನು
ಪೂರೈಸಿದನು.

ಆ ಸಮಯದಲ್ಲಿ ಮಣಿ-ಕಾಂಚನ-ರತ್ನ-ಗೋವು-ಆನೆ-ಅಶ್ವಧನಗಳಿಂದ ಕೂಡಿದ್ದ ಪಾಂಡವರ ಸಮೃದ್ಧ ಸಂಪತ್ತನ್ನು ನೋಡಿದ


ದುರ್ಯೋಧನನಲ್ಲಿ ಅಸೂಯೆ-ಕೋಪಗಳು ಮೂಡಿದವು. ಪಾಂಡವರಿಗೆ ಉಡುಗೊರೆಯಾಗಿ ದೊರಕಿದ್ದ ಮಯ ನಿರ್ಮಿತ
ವಿಮಾನಸದೃಶ ಸಭೆಯನ್ನು ನೋಡಿ ಅವನು ಇನ್ನೂ ಹೆಚ್ಚು ಬೆಂದನು. ಅಲ್ಲಿಯೇ ಭ್ರಮೆಗೊಂಡು ಜಾರಿ ಬಿದ್ದಾಗ ಅವನು
ಭೀಮಸೇನನಿಂದ ಅವಹೇಳನೆಗೊಳಪಟ್ಟನು. ವಿವಿಧ ಭುಂಜನ-ರತ್ನಗಳನ್ನು ಭೋಗಿಸುತ್ತಿದ್ದರೂ ಅವನು ವಿವರ್ಣನಾಗಿ
ಕೃಶನಾಗುತ್ತಿದ್ದಾನೆ ಎಂದು ಧೃತರಾಷ್ಟ್ರನಿಗೆ ತಿಳಿಯಿತು. ಮಗನ ಮೇಲಿನ ಪ್ರೀತಿಯಿಂದ ಅವನು ದ್ಯೂತವನ್ನು ಆಜ್ಞಾಪಿಸಿದನು.
ವಿದುರ, ದ್ರೋಣ, ಭೀಷ್ಮ, ಕೃಪ ಇವರ ಮಾತುಗಳನ್ನು ನಿರಾಕರಿಸಿ ಘೋರ ಯುದ್ಧದಲ್ಲಿ ಕ್ಷತ್ರಿಯರು ಪರಸ್ಪರರನ್ನು ಸಂಹರಿಸುವಂತೆ
ಮಾಡಿದನು. ಪಾಂಡುಪುತ್ರರು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮೇಲೆ ಜಯಗಳಿಸಿದರು ಎಂಬ ಅತಿ ಅಪ್ರಿಯ ವಿಷಯವನ್ನು
ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಸಂಜಯನಿಗೆ ಹೇಳಿದನು:

You might also like