You are on page 1of 9

।। श्री: ।।

ಕನಕ ಜಯಂತಿ
भक्तिदिनम ्

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು‌


ದೋಷರಾಶಿ ನಾಶಮಾಡು ಶ್ರೀಶ ಕೇಶವ

ಕರ್ನಾಟಕವು ಅನೇಕ ದಾಸರ ತವರೂರಾಗಿದೆ. ಅದೆಷ್ಟೋ ಮಹನೀಯರು ನಮ್ಮ ಪುಣ್ಯಭೂಮಿ ಕರ್ನಾಟಕದಲ್ಲಿ ಜನಿಸಿ
ಹರಿದಾಸ ತರಂಗಿಣಿಯ ಮೂಲಕ ಎಲ್ಲ ಶಾಸ್ತ್ರಗಳನ್ನು ಕನ್ನಡೀಕರಿಸಿ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದಾರೆ.
ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಹೀಗೆ ಇನ್ನೂ ಅನೇಕ
ದಾಸವರೇಣ್ಯರು ನಮಗೆ ಕೇಳಸಿಗುತ್ತಾರೆ.

ಪ್ರಸ್ತುತ ನಾವೀಗ ಕನ್ನಡ ಭಾಷೆಯನ್ನು ಭಕ್ತಿಯ ಭಾಷೆಯಾಗಿ,ತತ್ವದ ಭಾಷೆಯಾಗಿ, ಶಾಸ್ತ್ರ ಪುರಾಣಗಳ


ಭಾಷೆಯಾಗಿ,ಸಂಗೀತದ ಭಾಷೆಯಾಗಿ, ಬಳಸಿ ಹರಿಭಕ್ತಿಯನ್ನು ಬಿತ್ತಿ ಜನಸಾಮಾನ್ಯರ ಕಷ್ಟಕೋಟಲೆಗಳನ್ನು ದುಃಖ
ದುಮ್ಮಾನಗಳನ್ನು ದೂರ ಮಾಡಿದ ಕನಕದಾಸರ ಬಗ್ಗೆ ಯಥಾಮತಿ ತಿಳಿದುಕೊಳ್ಳಲು ಪ್ರಯತ್ನಿಸೋಣ. ಪ್ರಾಯ: ಕನಕದಾಸರ
ಹೆಸರನ್ನು ಕರ್ನಾಟಕದಲ್ಲಿ ಕೇಳದವರು ಇಲ್ಲ. ಪುರಂದರದಾಸರ ಸಮಕಾಲೀನರಾಗಿ ಶ್ರೀವ್ಯಾಸತೀರ್ಥರ ಶಿಷ್ಯರಾಗಿ
ಕೋಟ್ಯಧೀಶ್ವರರಾಗಿದ್ದು ವೈರಾಗ್ಯವನ್ನು ತಾಳಿ ಹರಿದಾಸರಾದವರು ಈ ನಮ್ಮ ಕನಕದಾಸರು.

ಕನಕದಾಸರ ಕವಿತೆಗಳಲ್ಲಿ ಗೂಡಾರ್ಥ ಬಹಳವಿರುತ್ತದೆ. ಒಗಟುಗಳು ಮುಂಡಿಗೆಗಳು ಬಹಳ


ವಿಶೇಷವಾಗಿರುತ್ತದೆ.ಸಾಮಾನ್ಯವಾಗಿ ಎಲ್ಲಾ ಹರಿದಾಸರ ಸಾಹಿತ್ಯಗಳಲ್ಲಿ ಮೇಲ್ನೋಟದ ಸಹಜವಾದ ಅರ್ಥ ಒಂದು ರೀತಿ ಇದ್ದರೆ,
ಆಧ್ಯಾತ್ಮಿಕವಾಗಿ ಗೂಡಾರ್ಥ ಇನ್ನೊಂದು ಇರುತ್ತದೆ, ಆದರೆ ಕನಕದಾಸರ ಪ್ರತಿಯೊಂದು ಹಾಡುಗಳನ್ನು ಸಹಜವಾಗಿ
ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯ. ಶಾಸ್ತ್ರಾರ್ಥಗಳನ್ನು, ಸಂಸ್ಕೃತವನ್ನು ಬಲ್ಲವರಿಗೆ ಕನಕದಾಸರ ಸಾಹಿತ್ಯಗಳನ್ನು ಅರ್ಥ
ಮಾಡಿಕೊಳ್ಳಲು ಸುಲಭವಾಗಿರುತ್ತದೆ. ಹಿರಿಯರ ಮಾತೊಂದಿದೆ “ಕನಕನ ಕೆಣಕಬೇಡ ಕೆಣಕಿ ತಿಣುಕಬೇಡ” ಎಂದು.
ಇದಕ್ಕೊಂದು ದೃಷ್ಟಾಂತ, ಒಮ್ಮೆ ಸಂಜೆಯ ಹೊತ್ತಿನಲ್ಲಿ ಕನಕದಾಸರು ವಾಯು ವಿಹಾರಕ್ಕೆ ಹೊರಟಾಗ ಯಾರೋ ಒಬ್ಬರು
ಪ್ರಶ್ನೆ ಮಾಡಿದರಂತೆ ಎಲ್ಲಿಗೆ ಹೊರಟಿದ್ದೀರಿ ಎಂದು, ಆಗ ಕನಕದಾಸರಿಂದ ಬಂದ ಉತ್ತರ ಹೀಗಿತ್ತಂತೆ.
ಯಾರದೋ ಹೆಂಡ್ತೀನಾ ಯಾರೋ ಹೊಡ್ಕೊಂಡು ಹೋದ್ರಂತೆ, ಅವರನ್ನು ಹುಡುಕ್ಕೊಂಡು ಇನ್ನ್ಯಾರೋ ಬಂದ್ರಂತೆ, ಅವರ ಅಪ್ಪನ
ಹುಡುಕೊಂಡು ನಾ ಹೋಗ್ತಿದೀನಿ.
(ಉತ್ತರವನ್ನು ಹುಡುಕಿ)

www.purnapramati.in
ಜೀವನಚರಿತ್ರೆ

ಹಾವೇರಿ ಜಿಲ್ಲೆಯ ಬಾಡವೆಂಬ ಗ್ರಾಮದಲ್ಲಿ 16ನೆಯ ಶತಮಾನದಲ್ಲಿ ಬೀರಪ್ಪ ಹಾಗೂ ಬಚ್ಚಮ್ಮನೆಂಬ ಕುರುಬ
ದಂಪತಿಗಳಿದ್ದರು. ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ 78 ಗ್ರಾಮಗಳ ಅಧಿಕಾರಿಯಾಗಿ ಬೀರಪ್ಪನು ನೋಡಿಕೊಳ್ಳುತ್ತಿದ್ದನು.
ಸಿರಿವಂತಿಕೆಯ ಎಲ್ಲ ವೈಭವವು ಈ ಆದರ್ಶ ದಂಪತಿಗಳಿಗಿದ್ದರೂ ಮಕ್ಕಳಿಲ್ಲವೆಂಬ ಕೊರಗು ಅವರನ್ನು ತುಂಬಾ ಬಾಧಿಸುತ್ತಿತ್ತು.
ಕುಲದೈವನಾದ ತಿರುಪತಿ ಶ್ರೀನಿವಾಸನ ಪ್ರಾರ್ಥಿಸುತ್ತಾ ಮೊರೆ ಹೋಗಲು ಒಂದು ದಿನ ರಾತ್ರಿ ಸಪ್ನದಲ್ಲಿ ಭೂ ವೈಕುಂಠನಾದ
ಶ್ರೀನಿವಾಸನು ದಂಪತಿಗಳಿಬ್ಬರು ನನ್ನ ದರುಶನವನ್ನು ಪಡೆದರೆ ಪುತ್ರ ಸಂತಾನವಾಗುವುದೆಂದು ಸೂಚಿಸಿದನು. ಸ್ವಪ್ನ ಕಂಡ
ದಂಪತಿಗಳಿಬ್ಬರು ಅತ್ಯಂತ ಸಂತೋಷ ಹಾಗೂ ಭಕ್ತಿಯಿಂದ ತಿರುಪತಿಗೆ ಪ್ರಯಾಣ ಬೆಳೆಸಿದರು. ತಿರುಪತಿಯಲ್ಲಿ ಶ್ರೀ ಶ್ರೀನಿವಾಸನ
ದರ್ಶನವನ್ನು ಪಡೆದು ಸೇವೆಗೆ ಪ್ರಾರ್ಥಿಸಿ ತಮ್ಮ ಗ್ರಾಮಕ್ಕೆ ಹಿಂತಿರುಗಿದರು. ಸ್ವಲ್ಪ ಕಾಲದಲ್ಲಿ ಬಚ್ಚಮ್ಮ ಗರ್ಭವತಿಯಾದಳು,
ಅಂದಾಜಿನ ಪ್ರಕಾರ (ಕಾರ್ತಿಕ ಬಹುಳ ತದಿಗೆಯಂದು) ನವಮಾಸದ ನಂತರ ಗಂಡು ಮಗುವಿಗೆ ಜನ್ಮ ನೀಡಿದಳು, ಆಗ ಇಡೀ
ಗ್ರಾಮದ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬೀರಪ್ಪ ನಾಯಕನು ಅತೀವ ಸಂತೋಷದಿಂದ ಇಡೀ ಗ್ರಾಮದ ಜನರಿಗೆ
ಸಿಹಿಯನ್ನು ಹಂಚಿದನು. ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯದಿಂದ ಜನಿಸಿದ ಮಗುವಿಗೆ ತಿಮ್ಮಪ್ಪನೆಂದೇ ಹೆಸರಿಟ್ಟರು.

ತಿಮ್ಮಪ್ಪನನ್ನು ಬೀರಪ್ಪ ಹಾಗೂ ಬಚ್ಚಮ್ಮದಂಪತಿಗಳು ಬಹಳ ಮುದ್ದಾಗಿ ಪ್ರೀತಿಯಿಂದ ಬೆಳೆಸಿದ ಅತ್ಯಂತ ಚೂಟಿಯಾದ
ಬಾಲ್ಯದಲ್ಲಿ ಆಟ ಪಾಠಗಳನ್ನು ಆಡುತ್ತಾ ಬೆಳೆಯಹತ್ತಿದನು. ನಾಯಕನಾಗಿದ್ದ ಬೀರಪ್ಪನು ತನ್ನ ಮಗನಿಗೆ ಆಚಾರ್ಯರ ಬಳಿ
ವಿದ್ಯೆಯನ್ನು ಕೊಡಿಸಿದನು. ಆಚಾರ್ಯರ ಬಳಿ ಅನೇಕ ಪುರಾಣ ಕಥೆಗಳನ್ನು ಕೇಳಿದ ತಿಮ್ಮಪ್ಪನಿಗೆ ದೇವರಲ್ಲಿ ಭಕ್ತಿ
ಜಾಗೃತವಾಗುತ್ತಾ ಹೋಯಿತು, ಜೊತೆಗೆ ಕುದುರೆ ಸವಾರಿ, ಕತ್ತಿ ವರಸೆ, ಕುಸ್ತಿ ಮಾಡುವುದು, ಬೇಟೆಯಾಡುವುದು
ಮುಂತಾದವುಗಳನ್ನು ಕಲಿಸಿದನು. ತಿಮ್ಮಪ್ಪನು 13 ವರುಷವಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಯಿತು.
ಚಿಕ್ಕ ಬಾಲಕನಾದರೂ ತನ್ನ ತಂದೆಯ ಆಡಳಿತದಲ್ಲಿರುವ ಕೆಲಸವನ್ನು ಅಚ್ಚುಕಟ್ಟಾಗಿ ದಕ್ಷತೆಯಿಂದ ನಿಭಾಯಿಸಿದನು ತಿಮ್ಮಪ್ಪ.
ಕಾರ್ಯನಿಮಿತ್ತ ಬಾಡದ ಸಮೀಪದಲ್ಲಿರುವ ಕಾಗಿನೆಲೆಗೆ ಬಂದು ಭೂ ಶೋಧನೆ ಮಾಡುತ್ತಿರಲು ತಿಮ್ಮಪ್ಪನಿಗೆ ಭೂಗತವಾಗಿದ್ದ
ಅಪಾರ ಕನಕ ಧನರಾಶಿಯು ಕರಗತವಾಯಿತು. ಕನಕ ರಾಶಿಯು ಕರವಶವಾದುದನ್ನು ನೋಡಿ ಊರಿನ ಜನರೆಲ್ಲರೂ
ತಿಮ್ಮಪ್ಪನನ್ನು ಕನಕನಾಯಕನೆಂದು ಕರೆಯಲು ಆರಂಭಿಸಿದರು ಅಂದಿನಿಂದ ತಿಮ್ಮಪ್ಪನು ಕನಕ ನಾಯಕನ ಹೆಸರಿನಲ್ಲಿ
ಪ್ರಸಿದ್ಧಿಗೊಂಡನು. ಕಾಗಿನೆಲೆಯಲ್ಲಿ ತನಗೆ ಸಿಕ್ಕ ಸಂಪತ್ತನ್ನೆಲ್ಲ ಕೇಶವ ದೇವರ ದೇವಸ್ಥಾನಕ್ಕಾಗಿ ವಿನಯೋಗಿಸಿದ ಕನಕ
ನಾಯಕನು ಬಾಡ ಗ್ರಾಮದಲ್ಲಿರುವ ಕೇಶವ ದೇವರನ್ನು ಕಾಗಿನಲೆಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಎಲ್ಲ ಕ್ಷೇತ್ರಗಳಲ್ಲಿ
ನಡೆಯುವಂತೆ ಈ ದೇವಸ್ಥಾನದಲ್ಲಿ ಎಲ್ಲಾ ಪೂಜೆಗಳು ನಿರಂತರವಾಗಿ ನಡೆಯುವ ವ್ಯವಸ್ಥೆಯನ್ನು ಮಾಡಿದನು.

ಕಾಲಾನಂತರದಲ್ಲಿ ಮದುವೆಯಾಯಿತು, ತಾಯಿಯನ್ನು ಕಳೆದುಕೊಂಡ ಸ್ವಲ್ಪ ದಿವಸಗಳಲ್ಲಿ ಹೆಂಡತಿಯನ್ನು


ಪಡೆದುಕೊಳ್ಳುವ ಸ್ಥಿತಿ ಬಂದೊದಗಿತು. ಒಮ್ಮೆ ವಿಜಯನಗರದ ಅರಸರ ಯುದ್ಧಕಾಲದಲ್ಲಿ ಕನಕ ನಾಯಕನು ಭಾಗವಹಿಸುವ
ಸನ್ನಿವೇಶ ಬಂದು ಯುದ್ಧದ ಸಮಯದಲ್ಲಿ ಬಹಳ ಗಾಯಗಳಾಗಿ ಪ್ರಜ್ಞೆ ತಪ್ಪಿ ಬಿದ್ದಾಗ ನನ್ನ
ದಾಸನಾಗು ಎಂದು ಅಶರೀರವಾಣಿಯೊಂದು ಕೇಳಿಸಿತು. ಭಗವಂತನ
ದಾಸನಾಗುವ ದಾರಿಯ ಗುರಿಯನ್ನು ತೋರುವ ಗುರುವನ್ನು ಹುಡುಕಿಕೊಂಡು
ಸ್ವಪ್ನದಲ್ಲಿ ಸೂಚನೆಯಾದಂತೆ ವ್ಯಾಸ ಸಮುದ್ರದಲ್ಲಿರುವ ಶ್ರೀ ವ್ಯಾಸ ತೀರ್ಥರನ್ನು
ಕಾಣಲು ಹೊರಟರು.

ಶ್ರೀ ವ್ಯಾಸ ತೀರ್ಥರು ಕನಕನಾಯಕನನ್ನು ಪರೀಕ್ಷಿಸಿ ತಮ್ಮ ಶಿಷ್ಯನನ್ನಾಗಿ


ಮಾಡಿಕೊಂಡು ಉಪದೇಶವನ್ನು ಮಾಡಿದರು. ಭಕ್ತಿಯತ್ತ ಒಲಿದ ಮನಸ್ಸು
ಮುಕ್ತಿಯತ್ತ ಗಮನಹರಿಸಿತು, ಬದುಕು ಬದಲಾಯಿತು, ತಾಳ ತಂಬೂರಿಗಳನ್ನ
ಪಿಡಿದು ದಾಸರಾದರು, ಕೇಶವನ ಭಕ್ತರಾದರು. ಅಂದಿನಿಂದ ಕನಕನಾಯಕರು
ಆದಿಕೇಶವ ಎಂಬ ಅಂಕಿತನಾಮದಿಂದ ಹಲವಾರು ಕೀರ್ತನೆಗಳನ್ನು ರಚಿಸಿ
ಮನುಜ ಕುಲಕ್ಕೆ ಮಹದೋಪಕಾರವನ್ನು ಮಾಡಿದ್ದಾರೆ. ಎಲ್ಲ ಹರಿದಾಸರ
ಕೃತಿಗಳಲ್ಲಿ ಸಮಾಜದ ಎಲ್ಲ ಆಗುಹೋಗುಗಳನ್ನು ತೆರೆದಿಟ್ಟಿರುತ್ತಾರೆ.

ಕನಕದಾಸರ ಕೃತಿಗಳಲ್ಲಿರುವ ನಾಣ್ಣುಡಿಗಳು (ಪರಿಚಯಕ್ಕಾಗಿ)

www.purnapramati.in
● ಅರಸಿನಂತೆ ಬಂಟ.
● ಬೀದಿಯೊಳೇತರ ನಂಟು.
● ಕೆಟ್ಟು ನಂಟರ ಸೇರುವುದು ಬಲುಕಠಿಣ.
● ತಾಯಿ ತೀರಿದ ಮೇಲೆ ತವರುಮನೆಯೆ.
● ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು.
● ಬಡತನ ಬಂದಾಗ ನಂಟರ ಬಾಗಿಲ ಸೇರಬಾರದು.
● ಆರು ಹಿತವರು ನಿನಗೆ ಈ ಮೂವರೊಳಗೆ.
● ಉಂಡು ನಗದಿಹ ಮೋರೆ ಅದು ಕಹಿಯ ಸೋರೆ.
● ನಿರ್ಮಳಿಲ್ಲದ ಮನಸು ಅದು ಕಜ್ಜಿ ತಿನಿಸು.
● ಶ್ರಮವಿಲ್ಲದ ಗಂಡು ಕರಿ ಒನಕೆಯ ತುಂಡು.
● ಜಲವೆ ಸಕಲ ಕುಲಕೆ ತಾರೆಯಲ್ಲವೆ
● ಆದಿಕೇಶವದಿದಧಿಕ ದೈವವುಂಟೆ
● ಬಾಯಿನಾರಿದ ಮೇಲೆ ಏಕಾಂತವೇ
● ತಾಯಿ ತೀರಿದ ಮೇಲೆ ತೌರಾಸೆಯೇ
● ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೇ
● ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
● ಸುಜ್ಞಾನಿಗಳ ಕೂಡೆ ಜಗಳವೇ ಲೇಸು

ಪ್ರತಿಯೊಂದು ದಾಸರ ಕೃತಿಗಳಲ್ಲಿರುವ ಇಂತಹ ಸಾಲುಗಳನ್ನು ತಿಳಿದುಕೊಳ್ಳೋಣ ಮಕ್ಕಳಿಗೆ ತಿಳಿಸೋಣ.

ಕನಕದಾಸರ ೫ ಕಾವ್ಯಕೃತಿಗಳು

1. ಮೋಹನ ತರಂಗಿಣಿ -42 ಸಂಧಿ 2798 ಪದ್ಯ


2. ನಳ ಚರಿತ್ರೆ -481
3. ರಾಮಧಾನ್ಯ ಚರಿತೆ -156
4. ಹರಿಭಕ್ತಿಸಾರ -110
5. ನೃಸಿಂಹಸ್ತವ (ಲಭ್ಯವಿಲ್ಲ)

ಇಷ್ಟೇ ಅಲ್ಲದೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಉಗಾಭೋಗಗಳು, ಮುಂಡಿಗೆಗಳು, ಸುಳಾದಿಗಳನ್ನು ರಚಿಸಿ
ಕೊಟ್ಟಿದ್ದಾರೆ.

ಕೀರ್ತನೆ (ಪರಿಚಯಕ್ಕಾಗಿ ಮಾತ್ರ)

● ನಮ್ಮಮ್ಮ ಶಾರದೆ
● ವರವ ಕೊಡು ಎನಗೆ ವಾಗ್ದೇವಿ
● ಎನ್ನ ಕಂದ ಹಳ್ಳಿಯ ಹನುಮ
● ಏಳು ನಾರಾಯಣ
● ಈತನಿಗ ವಾಸುದೇವ
● ಬಾರೋ ಕೃಷ್ಣಯ್ಯ
● ದೇವೀ ನಮ್ಮ ದ್ಯಾವರು ಬಂದವ್ರೇ
● ಬಾಗಿಲನು ತೆರೆದು ಸೇವೆಯನು ಕೊಡು
● ನಿನ್ನ ನಾನೇನೆಂದನೋ
● ಬಂಟನಾಗಿ ಬಾಗಿಲ ಕಾಯುವೆ
● ಇಷ್ಟು ದಿನ ಈ ವೈಕುಂಠ

www.purnapramati.in
● ಬಾರೋ ಕೃಷ್ಣಯ್ಯ
● ತಲ್ಲಣಿಸದಿರು ಕಂಡ್ಯ
● ಕಂಡೆ ನಾ ನರಸಿಂಹನ
● ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
● ಮುಟ್ಟದಿರೋ ಎನ್ನನು
● ಈತನಿಗ ವಾಸುದೇವನು
● ಹಲವು ಜೀವನವ ಒಂದೆಲೆ ನುಂಗಿತು
● ಲಾಲಿಪಾವನಚರಣ
● ಈಶ ನಿನ್ನ ಚರಣ ಭಜನೆ
● ಪರಮಪುರುಷಹರಿಗೋವಿಂದ

ಉಗಾಭೋಗ(ಪರಿಚಯಕ್ಕಾಗಿ ಮಾತ್ರ)

ಬೆನಕನ ಒಲ್ಲೆನವ್ವ ತುಲಕಿ ಆಡುವನ


ಷಣ್ಮುಖನನೊಲ್ಲೆನವ್ವ ಬಹುಬಾಯಿಯವನ
ಇಂದ್ರನನೊಲ್ಲೆನವ್ವ ಮೈಯೆಲ್ಲ ಕಣ್ಣಿನವನ
ಚಂದ್ರನನೊಲ್ಲೆನವ್ವ ಕಳೆಗುಂದುವವನ
ರವಿಯನೊಲ್ಲೆನವ್ವ ಉರಿದು ನೋಡುವವನ
ಹರನನೊಲ್ಲೆನವ್ವ ಮರುಳುಗೊಂಬುವನ
ಚನ್ನರಾಯ ಚೆಲುವ ಜಗಕೆಲ್ಲ ಒಡೆಯನ
ಕರೆದು ತಾರೆ ಎನಗೆ ನೆಲೆಯಾದಿಕೇಶವನ.

ಮುಂಡಿಗೆ(ಪರಿಚಯಕ್ಕಾಗಿ ಮಾತ್ರ)

ಪರಮಪುರುಷನೀನೆಲ್ಲಿಕಾಯಿl
ಸರಸಿಯೊಳಗೆಕರಿಕೂಗಲುಕಾಯಿll
ಹಿಡಿದುಮಾಡಿದಪಾಪನುಗ್ಗೆಕಾಯಿl
ಹರಿನಿನ್ನಧ್ಯಾನಬಾಳೆಕಾಯಿll
ಸರ್ವಜೀವರಿಗುಣಿಸಿಯುಂಬದನೆಕಾಯಿl
ಅರಿಷಡ್ವರ್ಗಗಳೊದಗಿಲೈಕಾಯಿll
ಘೋರದುಷ್ಕೃತಗಳೆಲ್ಲಸೋರೆಕಾಯಿl
ಭಾರತಕಥೆಕರ್ಣತುಪ್ಪೀರೆಕಾಯಿll
ವಾರಿಜಾಕ್ಷನಗತಿಯಂದಿಪ್ಪೆಕಾಯಿl
ಮುರಹರನಿನ್ನವರುಅವರೆಕಾಯಿll
ಗುರುಕರುಣಾಮೃತವುಣಸೆಕಾಯಿl
ವರಭಕ್ತವತ್ಸಲನಹೆಸರಕಾಯಿll
ಸಿರಿಆದಿಕೇಶವನಿನ್ನನಾಮಮೆಣಸುಕಾಯಿll

ಅರ್ಥಚಿಂತನೆ
ಪರಮಪುರುಷ ನೀ ನಾನೆಲ್ಲಿದ್ದರೂ ರಕ್ಷಿಸು,
ಗಜೇಂದ್ರವರದ ಭಗವಂತ ನನ್ನ ರಕ್ಷಿಸು,
ನಾವು ಮಾಡಿದ ಪಾಪಗಳು ನಮ್ಮತ್ತ ನುಗ್ಗದಂತೆ ರಕ್ಷಿಸು,
ನನ್ನ ಬಾಳಿಗೆ ಸದಾ ನಿನ್ನ ಧ್ಯಾನ ಕೊಟ್ಟು ರಕ್ಷಿಸು,
ಎಲ್ಲ ಜೀವರಿಗೆ ತಮ್ಮ ಕರ್ಮದ ಫಲಗಳನುಣಿಸುವ, ಕರ್ಮ ಲೇಪನವಿಲ್ಲದ ನೀನು ನನ್ನನ್ನು ರಕ್ಷಿಸು,

www.purnapramati.in
ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರಗಳಿಂದ ನನ್ನ ರಕ್ಷಿಸು,
ಘೋರ ದುರಿತಗಳನ್ನು ಸೋರಿ ಹೋಗುವಂತೆ ಮಾಡಿ ರಕ್ಷಿಸು,
ಮಹಾಭಾರತ, ಭಾಗವತ, ರಾಮಾಯಣದಂತಹ ಕಥೆಗಳು ನನ್ನ ಕಿವಿಯನ್ನು ತುಂಬಿರುವಂತೆ ರಕ್ಷಿಸು,
ನೀನೆ ಗತಿ ಎಂದು ನಂಬಿದವರನು ತಪ್ಪದಲೆ ರಕ್ಷಿಸು,
ಮುರಹರನೆ ನಿನ್ನ ನಂಬಿದವರು ನಿನ್ನವರೆಂದು ರಕ್ಷಿಸು,
ನಿನ್ನ ಕರುಣೆಯೊಂದಿಗೆ ಗುರು ಕರುಣೆಯನ್ನು ಕೊಟ್ಟು ರಕ್ಷಿಸು,
ಭಕ್ತವತ್ಸಲನೆಂಬ ನಿನ್ನ ಹೆಸರನ್ನು ಉಳಿಸಿಕೊಳ್ಳಲು ರಕ್ಷಿಸು,
ಸಿರಿ ಆದಿಕೇಶವ ನಿನ್ನ ನಾಮಂ ಎಣಿಸುತ್ತಿರುವಂತೆ ರಕ್ಷಿಸು.

ಮುಂಡಿಗೆ ಕೀರ್ತನೆ

ಮಂಗಳಂ ಜಯ ಮಂಗಳಂ l
ಮಂಗಳಂ ಜಯ ಮಂಗಳಂ ll

ಅಂಧಕನನುಜನ ಕಂದನ ತಂದೆಯ l


ಕೊಂದನ ಶಿರದಲಿ ನಿಂದವನ ll
ಚಂದದಿ ಪಡೆದನ ನಂದನೆಯಳನೊಲ l
ವಿಂದ ಧರಿಸಿದ ಮುಕುಂದನಿಗೆ ll

ರಥವನಡರಿ ಸುಪಥದಲಿ ತಿರುಗುವ l


ಸುತನಿಗೆ ಶಾಪವನಿತ್ತವನ ll
ಖತಿಯನು ತಡೆದನ ಸತಿಯ ಜನನಿ ಸುತ l
ಸತಿಯರನಾಳಿದ ಚತುರನಿಗೆ ll

ಹರಿಯ ಮಗನ ಶಿರವರಿದನ ತಂದೆಯ l


ಹಿರಿಯಮಗನ ತಮ್ಮನಪಿತನ ll
ಭರದಿ ಭಕ್ಷಿಸಿದನ ಶಿರದೊಳು ನಟಿಸಿದ l
ವರ ಕಾಗಿನೆಲೆಯಾದಿಕೇಶವರಾಯಗೆ ll

ಇದನ್ನು ಈ ಕನಕದಾಸರ ಜಯಂತಿದಿನಕ್ಕೆ ಕಲಿತು ಸಮರ್ಪಿಸೋಣ. ನಂತರ ಅರ್ಥ ಚಿಂತನೆ ಮಾಡೋಣ.

ಕನಕರಿಗೊಲಿದ ಶ್ರೀಕೃಷ್ಣ

ಪೊಡವಿಗೊಡೆಯನಾದ ಉಡುಪಿಯ ಶ್ರೀಕೃಷ್ಣನಿಗೆ ಇಂದಿಗೂ ಗಂಜಿ ನೈವೇದ್ಯ


ಮಾಡುವ ಸಂಪ್ರದಾಯ ನಡೆದು ಬಂದಿದೆ. ಕಾರಣ ಕನಕದಾಸರು ತಾವು ತಿನ್ನುವ
ಗಂಜಿಯನ್ನು ಭಕುತಿಯಿಂದ ಶ್ರೀಕೃಷ್ಣನಿಗೆ ಅರ್ಪಿಸಿದರ ಸಂಕೇತವಾಗಿ. ಅಲ್ಲದೆ
ದೇವಾಲಯದ ಗೋಡೆಯನ್ನು ಬಿರುಕುಗೊಳಿಸಿ ತನ್ನ ಪರಮಭಕ್ತರಾದ ಕನಕದಾಸರಿಗೆ
ದರುಶನ ಕರುಣಿಸಿದ್ದನ್ನು ಈಗಲೂ ನಾವು ಕನಕನಕಿಂಡಿ ಯ ಮೂಲಕ ಕಾಣಬಹುದು.

ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣಂ ಪಾದಸೇವನಮ್


ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್
ನಮ್ಮ ಕರುನಾಡಿನ ಹರಿದಾಸರುಗಳಾದ ಪುರಂದರದಾಸರು, ಕನಕದಾಸರು,
ವಿಜಯದಾಸರು,ಗೋಪಾಲದಾಸರು,ಜಗನ್ನಾಥದಾಸರೆಲ್ಲರೂ ನವವಿಧ ಭಕ್ತಿಯಿಂದ
ಭಗವಂತನನ್ನು ಒಲಿಸಿಕೊಂಡಿದ್ದಾರೆ.

www.purnapramati.in
ಪೂರ್ಣಪ್ರಮತಿಯಲ್ಲಿ ಕನಕಜಯಂತಿಯನ್ನು ಭಕ್ತಿಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ನವವಿಧ ಭಕ್ತಿ ಎಂದು ಭಕ್ತಿಯನ್ನು ಹೆಸರಿಸಲಾಗಿದೆ. ಶ್ರವಣ,ಕೀರ್ತನ,ಸ್ಮರಣ, ಪಾದಸೇವನ,ಅರ್ಚನ,ವಂದನ ದಾಸ್ಯ, ಸಖ್ಯ,
ಆತ್ಮನಿವೇದನ. ಈ ರೀತಿ 9 ರೀತಿಗಳಲ್ಲಿ ಭಗವಂತನಲ್ಲಿ ಭಕ್ತಿಯನ್ನು ಮಾಡಿ ಮುಕ್ತಿ ಪಡೆದವರು ನಮ್ಮ ಭಾರತದೇಶದ ಅನೇಕ
ಇತಿಹಾಸಕಾರರು. ಧ್ರುವ, ಪ್ರಹ್ಲಾದ,...ಮೊದಲಾದ ರಾಜರು ವಸಿಷ್ಠ,ಅತ್ರಿ,ಭೃಗು ….ಮೊದಲಾದ
ಋಷಿಗಳುಪುರಂದರದಾಸ,ಕನಕದಾಸರು.. ಮೊದಲಾದ ದಾಸರುಗಳು.

ಶ್ರವಣಮ್
ಭಗವಂತನ, ಭಗವದ್ಭಕ್ತರ ಹಾಗೂ ಭಾರತದ ನೈಜ ಕಥೆಗಳನ್ನು ಕೇಳುವುದು.
ಉದಾ:- ರಾಮಾಯಣ, ಮಹಾಭಾರತ, ಭಾಗವತ ಕಥೆಗಳು.

ಕೀರ್ತನಮ್
ಸ್ತೋತ್ರಗಳನ್ನು, ಹಾಡುಗಳನ್ನು ಹೇಳುವುದು.
ಉದಾ:-ನಿತ್ಯ ಪಠಣೀಯ ಶ್ಲೋಕಗಳು, ಸ್ತೋತ್ರಗಳು, ಕೃಷ್ಣಸ್ತುತಿಪಂಚಕ, ಭಗವದ್ಗೀತೆ,ಹರಿಭಕ್ತಿಸಾರ…etc

ಸ್ಮರಣಮ್
ದೇವರ ಸ್ಮರಣೆ ಪ್ರತಿಕ್ಷಣ ಮಾಡುವುದು, ದೇವರಿಗಾಗಿ, ದೇಶಕ್ಕಾಗಿ ತ್ಯಾಗ ಮಾಡಿದವರ ಸ್ಮರಣೆಯನ್ನು ಮಾಡುತ್ತಾ
ಮಾಡಿಸುವುದು.
ಉದಾ :- ಏಳುವಾಗ,ಕೂಡುವಾಗ, ಮಾತನಾಡುವಾಗ,ಹೊರಡುವಾಗ, ಊಟ ಮಾಡುವಾಗ, ಮಲಗುವಾಗ, ಪ್ರತಿ ಕೆಲಸ
ಮಾಡುವಾಗ,ದೇವರ ಸ್ಮರಣೆ ಮಾಡುವುದು,ಭಕ್ತಿ ಪ್ರಧಾನ ಹಾಡುಗಳು, ದೇಶ ಭಕ್ತಿ ಗೀತೆಗಳನ್ನು ಹಾಡುವುದು, ಸೈನಿಕರ
ಹೆಸರಿನಲ್ಲಿ ದೀಪ ಹಚ್ಚುವುದು, ಶಾಂತಿ ಮಂತ್ರ ಪಠಿಸುವುದು.

ಪಾದಸೇವನಮ್
ದೇವರ,ದೇಶದ, ಸೇವೆಯೊಂದಿಗೆ ಮನೆಯ ಹಿರಿಯರ ಸೇವೆಯನ್ನು ಮಾಡುವುದು.
ಉದಾ:- ತಂದೆ, ತಾಯಿ, ಗುರು ಹಿರಿಯರ ಪಾದ ಪ್ರಕ್ಷಾಲನೆ ಮಾಡುವುದು, ಭಾರತದ ಕ್ಷೇತ್ರಗಳ ಹೆಸರು, ಕ್ಷೇತ್ರಗಳ ಮಹತ್ವ
ತಿಳಿಯುವುದು, ಭಗವಂತನ ಪಾದದಲ್ಲಿನ ಚಿನ್ಹೆಗಳನ್ನು ಅರಿತು, ಚಿತ್ರಿಸಿ, ಬಣ್ಣ ತುಂಬುವುದು.

ಅರ್ಚನಮ್
ಪ್ರತಿನಿತ್ಯ ದೇವರಪೂಜೆ,ದೇಶಸೇವೆ, ಗೋರಕ್ಷಣೆ,ಗೋಪೂಜೆ,ತುಲಸೀಪೂಜೆ,ತುಲಸೀರಕ್ಷಣೆ, ಪ್ರಕೃತಿ ರಕ್ಷಣೆ, ಜಲಸಂರಕ್ಷಣೆ,
ವೃಕ್ಷಗಳ ರಕ್ಷಣೆ, ನಿತ್ಯಕರ್ಮಗಳನ್ನು ನಿರಂತರ ಮಾಡುವುದು.
ಉದಾ :- ಬೆಳಗ್ಗೆ ಪ್ರಾರ್ಥನೆಯೊಂದಿಗೆ ದಿನವನ್ನು ಪ್ರಾರಂಭಿಸುವುದು ಹಾಗು ಸಮರ್ಪಣೆಯೊಂದಿಗೆ ಕೊನೆಗೊಳಿಸುವುದು,
ಭಗವಂತನ ಅರ್ಚನೆಗೆ ಸೂಕ್ತವಾದ ಪುಷ್ಪಗಳ ಬಗ್ಗೆ ತಿಳಿಯುವುದು ( ಸಾಧ್ಯವಾದರೆ ಮನೆಯಲ್ಲಿ ಬೆಳೆಸುವುದು), ಪ್ರಕೃತಿಯಲ್ಲಿನ
ಪ್ರಾಣಿ, ಪಕ್ಷಿ, ಗಿಡ ಮರಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಪೋಷಿಸುವುದು. ಮಾತನಾಡುವ ಪ್ರತಿಯೊಂದು ನುಡಿಯನ್ನು
ದೇವರಿಗೆ ಮಂತ್ರವೆಂದು, ಪ್ರತಿ ಹೆಜ್ಜೆಯನ್ನು ಪ್ರದಕ್ಷಿಣಎಂದು ಅರ್ಪಿಸುವುದು.

ವಂದನಮ್
ಭಕ್ತಿಯಿಂದ ಪಂಚಾಂಗ ನಮಸ್ಕಾರ ಹಾಗೂ ಅಷ್ಟಾಂಗ ನಮಸ್ಕಾರ ಮಾಡುವುದು, ಗುರು ಹಿರಿಯರಲ್ಲಿ ಭಗವಂತನನ್ನು ಕಂಡು
ನಮಿಸುವುದು, ದೇವಾಲಯಗಳಿವೆ ಹೋಗಿ ಪ್ರದಕ್ಷಿಣೆ ನಮಸ್ಕಾರ ಹಾಕುವುದು, ಎಲ್ಲರಲ್ಲಿರುವ ಜ್ಞಾನಕ್ಕೆ ಹಾಗು ಸಾಧನೆಯನ್ನು
ಕಂಡು ನಮಿಸುವುದು, ಅವಯವಗಳಲ್ಲಿ ಇರುವ ದೇವರ ರೂಪ ಚಿಂತನೆ ಮಾಡುವುದು.

ದಾಸ್ಯಮ್
“ಜನಸೇವೆಯೇ ಜನಾರ್ದನ ಸೇವೆ” ಎಂದು ತಿಳಿದು ಬದುಕುವುದು. ಸಾಧ್ಯವಾದಷ್ಟು ಎಲ್ಲ ಹಿರಿಯರ ಸೇವೆ ಮಾಡುವುದು.
ಉದಾ:- ಗುರು ಹಿರಿಯರ ಬಗ್ಗೆ ಕೋಪ,ಮಾಡಿಕೊಳ್ಳದೆ ಅವರ ಮಾತನ್ನು ಗೌರವಿಸಿ ಪಾಲಿಸುವುದು. ಅಪ್ಪ - ಅಮ್ಮ ಹೇಳಿದ
ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು. ದೇವರನ್ನು ನಮ್ಮ ಸ್ವಾಮಿ ಎಂದು ಚಿಂತಿಸಿ, ಪರಿ ಪರಿಯಾಗಿ ಸೇವಿಸುವುದು ( ಈಶ ನಿನ್ನ

www.purnapramati.in
ಚರಣ ಭಜನೆ ಆಶೆಯಿಂದ ಮಾಡುವೆನು ಎಂಬುವ ಹಾಗೆ ). ರಾಮಚಂದ್ರನ ಮೇಲೆ ಹನುಮಂತನ ದಾಸ್ಯತ್ವವನ್ನು ಅರಿತು
ರೂಢಿಸಿಕೊಳ್ಳುವುದು.

ಸಖ್ಯಮ್
ಶ್ರೀರಾಮಚಂದ್ರನ ಆದರ್ಶ ಗುಣಗಳನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡುವುದು. ಎಲ್ಲರೊಂದಿಗೆ ಪ್ರೀತಿಯಿಂದ ಇರುವುದು.
ಉದಾ:- ಕಷ್ಟದಲ್ಲಿದ್ದವರಿಗೆ ಮುಂದಾಗಿ ಸಹಾಯ ಹಸ್ತ ಚಾಚುವುದು. ನಾವೇ ಎಲ್ಲರನ್ನೂ ಮೊದಲು ಮಂದಹಾಸದಿಂದ
ಮಾತನಾಡಿಸುವುದು, ಫಲಾಪೇಕ್ಷೆ ಬಯಸದೆ ಸ್ನೇಹ ಬಯಸುವುದು. ಪ್ರತಿ ಸ್ನೇಹ ಸಂಬಂಧದ ರಕ್ಷಣೆಗಾಗಿ ಕೃಷ್ಣ-ಸುಧಾಮನನ್ನು
ಸ್ಮರಿಸುವುದು. ಸಜ್ಜನರ ಹಾಗು ಭಗವದ್ಭಕ್ತರ ಸ್ನೇಹವನ್ನು ಬೆಳೆಸಿಕೊಳ್ಳುವುದು.

ಆತ್ಮನಿವೇದನಮ್
ದೇವರಿಗಾಗಿ,ದೇಶಕ್ಕಾಗಿ ತನು -ಮನ-ಧನವನ್ನು ಮೀಸಲಿಡುವುದು.
ಉದಾ:- ಈ ರೀತಿ ಜೀವನ ನಡೆಸಿದವರ ಬಗ್ಗೆ ತಿಳಿದು ಅವರಂತೆ ಬದುಕಲು, ಸ್ವಾಮಿ ನಿಷ್ಠೆ, ದೇಶ ನಿಷ್ಠೆ ಬೆಳೆಸಿಕೊಳ್ಳುವುದು,
ಅವರಿಗೆ ಬೇಕಾದ ಸಹಾಯ ಮಾಡುವುದು. ಪ್ರತಿದಿನ, ಪ್ರತಿ ಜನ್ಮದಲ್ಲಿ ಮಾಡಿರುವ ಕರ್ಮಗಳನ್ನು ಹರಿಗೆ ಅರ್ಪಿಸುವುದು.
ಆತ್ಮನಿವೇದನೆ ಮಾಡಿರುವ ಅನೇಕ ಅವಧೂತರ ಬಗ್ಗೆ ತಿಳಿಯುವುದು. ಜೀವನದ ಮೂಲ ಉದ್ದೇಶವನ್ನು ಅರಿತು ಸಾಧನೆ
ಮಾಡುವುದು.

ಈ ಒಂದೊಂದು ವಿಷಯದಲ್ಲಿರುವ ಯಾವುದಾದರೊಂದು ವಿಷಯವನ್ನು ನಾವೆಲ್ಲರೂ ಸಂಕಲ್ಪಿಸಿದಲ್ಲಿ ನಮ್ಮ


ಭಾರತದೇಶವು ರಾಮರಾಜ್ಯವಾಗುವುದರಲ್ಲಿ ಸಂದೇಹವೇ ಇಲ್ಲ. ನಮ್ಮ ಮಕ್ಕಳನ್ನು ಭಾರತಮಾತೆಯ ಮಕ್ಕಳನ್ನಾಗಿ ಬೆಳೆಸೋಣ,
ಭಾರತದೇಶಕ್ಕಾಗಿ ಬೆಳೆಸೋಣ, ಕನಕದಾಸರಂತೆ ಬೆಳೆಸಲು ಸಾಧ್ಯವಿಲ್ಲದಿದ್ದರೂ
ದಾಸರುಗಳ,ರಾಜರುಗಳ,ಋಷಿಗಳ,ನದಿಗಳ,ಪರ್ವತಗಳ ಕ್ಷೇತ್ರಗಳ,ಒಟ್ಟಾರೆ ಭಾರತದೇಶದ ಮಹತ್ವವನ್ನು, ವೈಭವವನ್ನು
ತಿಳಿಸಿಕೊಡುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ.

ಮಕ್ಕಳಿಗೆ ಚಿತ್ರಕಲಾ ಚಟುವಟಿಕೆಯ ಮೂಲಕ ಭಕ್ತಿದಿನದ ಆಚರಣೆ

ಹರಿದಾಸರ ಬಳಿ ಇರುವ ವಾದ್ಯಗಳ ಹಾಗೂ ಪದಾರ್ಥಗಳ ಹೆಸರುಗಳನ್ನು


ತಿಳಿಯುವ ಮೂಲಕ ಮಕ್ಕಳಿಗೆ ತಿಳಿಸಿಕೊಡೋಣ. ಈ ಕೆಳಗೆ ಇರುವ
ಚಿತ್ರಗಳನ್ನು ಮಕ್ಕಳು ರಂಗೋಲಿಯಲ್ಲಿ ಬರೆದು ಬಣ್ಣ ತುಂಬಿಸಲಿ.

www.purnapramati.in
ಕಂಬಳಿ

ದಂಡಿಗೆಬೆತ್ತ

ಗೋಪಾಲ ಬುಟ್ಟಿ

ತಾಳ

ತುಳಸಿಮಣಿ ಸರ,
ರುದ್ರಾಕ್ಷಿ ಸರ,
ಕಮಲಾಕ್ಷಿ ಸರ

ಚಿಟಿಕೆ

ಗೆಜ್ಜೆ

www.purnapramati.in
ಆಧಾರ
ಶ್ರೀಕನಕದಾಸರ ಕೀರ್ತನೆಗಳು
ಮಾಹಿತಿ ಸಂಗ್ರಹ
ಶ್ರೀಯುತ ಅಪ್ಪಣ್ಣಾಚಾರ್ಯರು
ಚಿತ್ರ ಕೃಪೆ - ಗೂಗಲ್

।। ಶ್ರೀಕೃಷ್ಣಾರ್ಪಣಮಸ್ತು ।।

www.purnapramati.in

You might also like